ಬಾಗಲಕೋಟೆ:
ಮಹಿಳಾ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಶುಕ್ರವಾರ ಹಮ್ಮಿಕೊಂಡ ಮಹಿಳಾ ಮತದಾರರ ವಿಶೇಷ ನೊಂದಣಿ ಅಭಿಯಾನದಲ್ಲಿ ಒಟ್ಟು 1425 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆ ರಾಜ್ಯಮಟ್ಟದ ಸರಾಸರಿಗಿಂತ ಕಡಿಮೆ ಇದ್ದು, ಜಿಲ್ಲೆಯ ಸಾಮಾನ್ಯ ಜನಸಂಖ್ಯೆ ಅನುಪಾತ ಮತ್ತು ಜನಗಣತಿಯ ಅನುಪಾತದ ಅಂಕಿ-ಸಂಖ್ಯೆಗಿಂತ ಬಹಳ ವ್ಯತ್ಯಾಸವಿದೆ. ಅದರಲ್ಲೂ ಮಹಿಳಾ ಮತದಾರರ ಸಂಖ್ಯೆಯ ವ್ಯತ್ಯಾಸ ತುಂಬಾ ಹೆಚ್ಚಾಗಿರುವದನ್ನು ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ವಿಶೇಷ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಒಳಗೊಂಡು ಇತರೆ ಪರಿಷ್ಕರಣೆಗೆ ಅಭಿಯಾನದಲ್ಲಿ ಒಟ್ಟು 2209 ಅರ್ಜಿಗಳು ಸ್ವೀಕೃತಗೊಂಡಿವೆ. ಅದರಲ್ಲಿ 18 ವರ್ಷ ಪೂರೈಸಿದ ಮಹಿಳಾ ಮತದಾರರಿಂದ 1425, ಯುವಕರಿಂದ 573, ತಿದ್ದುಪಡಿ ಹಾಗೂ ಬದಲಾವಣೆಗಾಗಿ 168 ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು 33 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ತಿಳಿಸಿದ್ದಾರೆ.