ಬಾಗಲಕೋಟೆ
ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರದ ಛಾಯೆ ತಲೆದೋರಿದ್ದು, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜೀತ್ ಕುಮಾರ ಸಾಹು ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡ ಬರ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿತು.
ಶನಿವಾರ ಜಿಲ್ಲೆಗೆ ಆಗಮಿಸಿ 4 ಜನ ಸದಸ್ಯರನ್ನೊಳಗೊಂಡ ಬರ ಅಧ್ಯಯನ ತಂಡವು ಬಾಗಲಕೋಟೆ ತಾಲೂಕಿನ ಹೊಸೂರು ಗ್ರಾಮದ ದಾವಲಸಾಬ ಕಾಸಿನಕುಂಟೆ ಅವರ ಜಮೀನಿನಲ್ಲಿ ಕಬ್ಬು ಬೆಳೆ ಹಾನಿಯನ್ನು ವೀಕ್ಷಿಸಿ ರೈತರಿಂದ ಹಾನಿಯ ವಿವರ ಪಡೆದುಕೊಂಡರು. ಚಿಟಕಿನಕೊಪ್ಪ ಗ್ರಾಮದ ಎರಡು ಎಕರೆ ಜಮೀನಲ್ಲಿ ಬೆಳೆದ ತೊಗರಿ ಬೆಳೆ ಹಾನಿಯನ್ನು ವೀಕ್ಷಣೆ ಮಾಡಿದರೆ, ಕೆಂಗಲ್ಲ ಕಡಪ್ಪಟ್ಟಿ ಗ್ರಾಮದಲ್ಲಿ ನರೇಗಾದಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ ರೈತರಿಗೆ ಹಾನಿಗೆ ಸೂಕ್ತ ಪರಿಹಾರ ದೊರೆಯುವಂತೆ ವರದಿ ಸಲ್ಲಿಸಲು ತಿಳಿಸಿದರು.
ಹುನಗುಂದ ತಾಲೂಕಿನ ನಂದನೂರ ಗ್ರಾಮದ ಮಲ್ಲಪ್ಪ ಕಂಬಳಿ ಅವರ ಜಮೀನಿಗೆ ಭೇಟಿ ನೀಡಿ ಮೆಣಸಿಣಕಾಯಿ ಮತ್ತು ಉಳ್ಳಾಗಡ್ಡಿ ಬೆಳೆ ಹಾನಿಯನ್ನು ವೀಕ್ಷಣೆ ಮಾಡುವ ವೇಳೆ ತನ್ನ ನೋವನ್ನು ತೋಡಿಕೊಂಡರು. ಒಂದು ಬಾರಿಗೆ ಪಕ್ಕದ ಬೋರವೆಲ್‍ನಿಂದ ನೀರು ಹಾಯಿಸಿದೆ. ನೀರಿಗಾಗಿ ಪ್ರತಿ ಬಾರಿ 20 ಸಾವಿರ ವೆಚ್ಚ ಬರುತ್ತಿದೆ ಎಂದರು.
ಹುನಗುಂದಕ್ಕೆ ತೆರಳಿದ ತಂಡ ಗೋವಿನ ಜೋಳ ಬೆಳೆದ ಹನಮಂತಗೌಡ ದೇವರೆಡ್ಡಿ ಅವರಿಂದ ಹಾನಿಯ ವಿವರ ಪಡೆದರು. ಗೋವಿನ ಬೆಳೆಯಲು ಒಂದು ಲಕ್ಷ ರೂ. ಖರ್ಚು ಮಾಡಿದ್ದು, ಬೆಳೆ ಸಂಪೂರ್ಣ ಹಾಳಾಗಿರುವುದಾಗಿ ರೈತರು ತಿಳಿಸಿದರು.
ಬೆವಿನಮಟ್ಟಿ ಗ್ರಾಮದಲ್ಲಿ ಬೆಳೆದ ಮೆಣಸಿನಕಾಯಿ, ರಕ್ಕಸಗಿ ಗ್ರಾಮದಲ್ಲಿ ಬೆಳೆದ ಮೆಕ್ಕೆ ಜೋಳ, ಸುಳೇಭಾವಿ ನಿಂಗವ್ವ ರಾಮದುರ್ಗ ಅವರ ಜಮೀನಿನಲ್ಲಿ ಬೆಳೆ ಮತ್ತು ನರೇಗಾ ಯೋಜನೆಯಡಿಯಲ್ಲಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲಿಸಿತು. ಅಮೀನಗಡ ಗ್ರಾಮದ ಹನಮಂತಪ್ಪ ಕುರಿ ಇವರ ಜಮೀನಿನ ಬೆಳೆ ಹಾನಿಯನ್ನು ಕೇಂದ್ರ ತಂಡ ವೀಕ್ಷಣೆ ಮಾಡಿತು. ಬಾದಾಮಿ ತಾಲೂಕಿನ ಕೆಂದೂರಿನಲ್ಲ ನಡೆದ ನರೇಗಾ ಕಾಮಗಾರಿಯನ್ನು ವೀಕ್ಷಿಸಿದರು. ಅಂದಾಜು ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದನ್ನು ತಂಡ ಮುಖ್ಯಸ್ಥರು ಹಾಗೂ ಸದಸ್ಯರು ವೀಕ್ಷಿಸಿದರು. ಒಟ್ಟಾರೆಯಾಗಿ ಬೆಳೆ ಹಾನಿಯ ಬಗ್ಗೆ ರೈತರೊಂದಿಗೆ ಚರ್ಚಿಸಿ ಬೆಳೆಹಾನಿ ಕುರಿತು ಮಾಹಿತಿಯನ್ನು ಪಡೆದುಕೊಂಡರು.
ಅಜಿತ್ ಕುಮಾರ ಸಾಹು ನೇತೃತ್ವದ ತಂಡದಲ್ಲಿ ಎಣ್ಣೆಬೀಜ ಅಭಿವೃದ್ದಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನು ಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯಾ, ನೀತ ಆಯೋಗದ ಸಂಶೋಧನ ಅಧಿಕಾರಿ ಶಿವಚರಣ ಮೀನಾ ಹಾಗೂ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ ಇದ್ದರು.
ಬರ ವೀಕ್ಷಣೆ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್.ವಾಯ್.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರಾಥ ರೆಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಕೃಷಿ ಉಪನಿರ್ದೇಶಕ ರೂಢಗಿ, ಹಿರಿಯ ವಿಜ್ಞಾನಿಗಳಾದ ಅರುಣ ಸತ್ರರೆಡ್ಡಿ, ಡಿ.ಎನ್.ಕಾಂಬ್ರೇಕರ, ತೋಟಗಾರಿಕೆ ವಿವಯ ಪ್ರಾದ್ಯಾಪಕ ವಸಂತ ಗಾಣಿಗೇರ ಸೇರಿದಂತೆ ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬರ ಪರಿಸ್ಥಿತಿ ಬಗ್ಗೆ ಕೇಂದ್ರ ತಂಡಕ್ಕೆ ಮನವರಿಗೆ ಮಾಡಿದ ಡಿಸಿ
ಬರ ವೀಕ್ಷಣೆ ಪೂರ್ವದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅಂಕಿ-ಅಂಶ ಮತ್ತು ಛಾಯಾಚಿತ್ರಗಳ ಮೂಲಕ ಬರಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿದರು. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದೆ. ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಒಟ್ಟು 1.93 ಹೆಕ್ಟೇರನಷ್ಟು ಬೆಳೆ ಹಾನಿಯಾಗಿದ್ದರಿಂದ 1998 ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಮುಖ್ಯವಾಗಿ ಗೋವಿನಜೋಳ, ಕಬ್ಬು, ಈರುಳ್ಳಿ, ಮೆಣಸಿನಕಾಯಿ, ತೊಗರಿ ಸೇರಿ ಹಲವು ಬೆಳೆಗಳು ಹಾನಿಗೊಳಗಾಗಿವೆ ಎಂದರು.