ನವದೆಹಲಿ: ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ರಾಜಧಾನಿಯ ಮಹಿಳಾ ಆಯೋಗದ 223 ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಲ್ ಅವರು ದಿಲ್ಲಿ ಮಹಿಳಾ ಆಯೋಗದ ತಮ್ಮ ಅಧ್ಯಕ್ಷಗಿರಿ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿಗಳನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ.
ದಿಲ್ಲಿ ಮಹಿಳಾ ಆಯೋಗ ಕಾಯ್ದೆ ಅಡಿಯಲ್ಲಿ ಕೇವಲ 40 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಹೆಚ್ಚುವರಿ ಸದಸ್ಯರ ನೇಮಕಾತಿಗೆ ಯಾವುದೇ ಅನುಮೋದನೆ ಪಡೆದುಕೊಂಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಹೊರಡಿಸಿರುವ ಆದೇಶ ಹೇಳಿದೆ.
ಉದ್ಯೋಗಿಗಳ ನಿಯೋಜನೆಗೆ ದಿಲ್ಲಿ ಸರ್ಕಾರದಿಂದ ಯಾವುದೇ ಆಡಳಿತಾತ್ಮಕ ಅನುಮತಿ ಮತ್ತು ವೆಚ್ಚ ಮಂಜೂರಾತಿ ಪಡೆದುಕೊಂಡಿಲ್ಲ. ಈ ಹುದ್ದೆಗಳಿಗೆ ಅರ್ಜಿಗಳನ್ನು ಸಹ ವಿತರಿಸಲಾಗಿಲ್ಲ. ಅಷ್ಟೇ ಅಲ್ಲದೆ, ಅನಧಿಕೃತವಾಗಿ ನೇಮಿಸಿಕೊಂಡ ಹುದ್ದೆಗಳಲ್ಲಿ ನಿಯೋಜನೆಯಾದ ಉದ್ಯೋಗಿಗಳಿಗೆ ಯಾವುದೇ ಕೆಲಸ ಅಥವಾ ಹೊಣೆಗಾರಿಕೆಗಳನ್ನು ಸಹ ನೀಡಿರಲಿಲ್ಲ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಗುತ್ತಿಗೆ ನೌಕರರಾಗಿ ಅವರನ್ನು ನಿಯೋಜಿಸಲು ಡಿಸಿಡಬ್ಲ್ಯೂಗೆ ಯಾವುದೇ ಅಧಿಕಾರ ಇಲ್ಲ. ಸಿಬ್ಬಂದಿ ನೇಮಕಾತಿಯಲ್ಲಿ ಡಿಸಿಡಬ್ಲ್ಯೂ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ. ಹಾಗೆಯೇ, ಹೆಚ್ಚುವರಿ ಸಿಬ್ಬಂದಿಯ ವಾಸ್ತವ ಅಗತ್ಯತೆ ಮತ್ತು ಪ್ರತಿ ಹುದ್ದೆಯ ಅರ್ಹತಾ ಮಾನದಂಡಗಳನ್ನು ಮೌಲ್ಯಮಾಪನ ಮಾಡುವ ಅಧ್ಯಯನ ಕೂಡ ನಡೆದಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
ಸ್ವಾತಿ ಮಳಿವಾಲ್ ಅವರು ಹಣಕಾಸು ಇಲಾಖೆ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆ ಪಡೆಯದೆಯೇ ಈ ನೌಕರರನ್ನು ನೇಮಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.