ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 7ನೇ ವೇತನ ಆಯೋಗದ ವರದಿಯನ್ನು ಸಲ್ಲಿಕೆ ಮಾಡಲಾಗಿದ್ದು, ಸಮಿತಿಯ ಅಧ್ಯಕ್ಷತೆ ಸುಧಾಕರ ರಾವ್ ನೇತೃತ್ವದಲ್ಲಿ ವರದಿ ಸಲ್ಲಿಕೆ ಮಾಡಲಾಗಿದ್ದು, ಈ ವೇಳೆ ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ವರದಿ ಸ್ವೀಕರಿಸಿದ ನಂತರ ಮಾತನಾಡಿದ ಸಿದ್ದರಾಮಯ್ಯ, 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ವರದಿ ಸಲ್ಲಿಸಿದ್ದಾರೆ. ವರದಿ ನೀಡಲು ಸರ್ಕಾರ ಸಮಿತಿ ರಚಿಸಿತ್ತು. ಶೇ.17 % ಅವರ ಬೇಸಿಕ್ ಪೇ ಮೇಲೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ವರದಿ ನೀಡಲು ಸರ್ಕಾರ ಮೂರು ತಿಂಗಳ ಅವಧಿ ಹೆಚ್ಚಳ ಮಾಡಿತ್ತು ಎಂದರು.
ನಿನ್ನೆ ಮೈಸೂರು ಪ್ರವಾಸದಲ್ಲಿದ್ದ ಕಾರಣ ವರದಿ ಸ್ವೀಕಾರ ಮಾಡಲು ಆಗಿರಲಿಲ್ಲ. ಇಂದು ಅಂತಿಮವಾದ ವರದಿ ಕೊಟ್ಟಿದ್ದಾರೆ. ಬೇಸಿಕ್ ಪೇ ಮೇಲೆ ಶೇ.27.5 ರಷ್ಟು ಹೆಚ್ಚಳ ಕೊಡಬೇಕೆಂದು ವರದಿ ಕೊಟ್ಟಿದ್ದಾರೆ. ಶಿಫಾರಸ್ಸಿನ ಪ್ರಕಾರ, ಕನಿಷ್ಠ ಮೂಲವೇತನವನ್ನು 17 ಸಾವಿರದಿಂದ 27 ಸಾವಿರ ರೂ.ಗಳಿಗೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಹೀಗೆ ಬೇರೆ ಶಿಫಾರಸ್ಸು ಇದೆ, ನಾನು ಅದನ್ನೆಲ್ಲ ಹೇಳಲು ಹೋಗುವುದಿಲ್ಲ. ವರದಿಯನ್ನು ಆರ್ಥಿಕ ಇಲಾಖೆ ಪರಿಶೀಲನೆ ಮಾಡಬೇಕು. ಶಿಫಾರಸ್ಸು ಪರಿಶೀಲನೆ ಮಾಡಿ ನಂತರ ಸರ್ಕಾರ ಸಲಹೆಗಳನ್ನು ಪಡೆದು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ವರದಿ ಸ್ವೀಕರಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ಷಡಕ್ಷರಿ, ಸರ್ಕಾರ ವರದಿ ಸ್ವೀಕಾರ ಮಾಡಿರುವುದಕ್ಕೆ ಖುಷಿ ಇದೆ. ಈ ಹಿಂದೆ ಸಿದ್ದರಾಮಯ್ಯ ನವರು 30% ಕೊಟ್ಟಿದ್ದರು. ಈಗ ಸರ್ಕಾರಕ್ಕೆ 27.50% ವೇತನ ಹೆಚ್ಚಳಕ್ಕೆ ಆಯೋಗ ವರದಿ ಕೊಟ್ಟಿದೆ. ಮತ್ತಷ್ಟು ಹೆಚ್ಚಳ ಮಾಡಲು ಮನವಿ ಮಾಡುತ್ತೇವೆ. ಸರ್ಕಾರ ಕೂಡಲೇ ವರದಿಯನ್ನ ಜಾರಿಗೊಳಿಸಬೇಕು. ಇದರಿಂದ 12 ಲಕ್ಷ ಸರ್ಕಾರಿ ನೌಕಕರಿಗೆ ಸಹಕಾರ ಆಗಲಿದೆ. ನಿವೃತ್ತ ನೌಕಕರ ಕುಟುಂಬಗಳಿಗೂ ಸಹಾಯ ಆಗಲಿದೆ ಎಂದು ತಿಳಿಸಿದರು.