ವಿಜಯಪುರ: ಲೋಕಸಭೆ ಚುನಾವಣೆಗೆ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದ ಕಾರು ಪತ್ತೆ ಮಾಡಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಕಾರಿನಲ್ಲಿದ್ದ 2.93 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಋಷಿಕೇಶ ಭಗವಾನ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಾಂಗಲಿಯ ಬಾಲಾಜಿ ನಿಕ್ಕಂ ಹಾಗೂ ಸಚಿನ್ ಮೋಯಿತೆ ಬಂಧಿತ ಆರೋಪಿಗಳು ಹೈದರಾಬಾದ್‌ನಿಂದ ಟೊಯೋಟೊ ಕಾರಿನಲ್ಲಿ ಹುಬ್ಬಳ್ಳಿಗೆ ಅಕ್ರಮ ಹಣ ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಸಿಇಎನ್ ಠಾಣೆ ಪೊಲೀಸರು, ಸಿಂದಗಿ ಬೈಪಾಸ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕಾರಿನಲ್ಲಿ 2.93 ಕೋಟಿ ರೂ. ಪತ್ತೆಯಾಗಿದೆ. ತಕ್ಷಣ ಅದರಲ್ಲಿದ್ದ ಆರೋಪಿಗಳನ್ನು ಬಂಧಿಸಿ, ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾಗಿ ಎಸ್ಪಿ ಋಷಿಕೇಶ ಭಗವಾನ್ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಇಎನ್ ಠಾಣೆಯ ಇನ್ಸಪೆಕ್ಟರ್ ಸುನೀಲಕುಮಾರ ನಂದೇಶ್ವರ, ಸಿಬ್ಬಂದಿ ಎಂ.ಕೆ. ಹಾವಡಿ, ಡಿ.ಆರ್. ಪಾಟೀಲ, ಎಂ.ಬಿ. ಪಾಟೀಲ, ಮಲ್ಲು ಹೂಗಾರ ಪಾಲ್ಗೊಂಡಿದ್ದರು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಯ ಕರ್ತವ್ಯವನ್ನು ಪ್ರಶಂಸಿಸಿದ್ದಾಗಿ ಎಸ್ಪಿ ತಿಳಿಸಿದರು
ಆರೋಪಿಗಳ ವಿರುದ್ಧ ಗೋಲಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.