ತಹಸೀಲ್ದಾರರಿಗೆ ಮನವಿ
ಬಾಗಲಕೋಟೆ
ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಫೆ.10 ರಿಂದ ನಡೆಯಲಿರುವ 2ನೇ ಹಂತದ ಹೋರಾಟದ ಕುರಿತು ಬಾಗಲಕೋಟೆ ತಾಲೂಕು ಘಟಕದಿಂದ ತಹಸೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.
ಸಂಘದ ಸದಸ್ಯರು ಕಚೇರಿಗೆ ಆಗಮಿಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅಮರೇಶ ಪಮ್ಮಾರ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ ಮುಗಳೊಳ್ಳಿ, ಹಲವು ಬೇಡಿಕೆಗಳಿಗೆ ಆಗ್ರಹಿಸಿ 2024, ಸೆ.26 ರಿಂದ ಅ.3ರವರೆಗೆ ರಾಜ್ಯಾದ್ಯಂತ ಗ್ರಾಮ ಆಡಳಿತಾಕಾರಿಗಳು ಕೆಲಸ ಸ್ಥಗಿತಗೊಳಿಸಿ ಅರ್ನಿಷ್ಟ ಮುಷ್ಕರ ನಡೆಸಿದ್ದರು. ಅಂದು ಸರಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಸುವ ಭರವಸೆ ದೊರೆತಿತ್ತು. ಆದರೆ ಸರಕಾರ ಈವರೆಗೆ ಯಾವುದೇ ಬೇಡಿಕೆಗೆ ಅಸ್ತು ಎನ್ನದೆ ಕಾಲ ಕಳೆಯುತ್ತಿದ್ದು ಗ್ರಾಮ ಆಡಳಿತಾಕಾರಿಗಳಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಮುಷ್ಕರದ ಕಾರಣವಿಟ್ಟುಕೊಂಡು ಈ ಮೊದಲಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಫೆ.10 ರಿಂದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅರ್ನಿಷ್ಟಾವಗೆ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಗ್ರಾಮ ಆಡಳಿತಾಕಾರಿ ಕಚೇರಿಗೆ ಮೂಲ ಸೌಲಭ್ಯ, ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿ, ಅನುಕಂಪದ ನೇಮಕಾತಿ ಹುದ್ದೆಯ ತಿದ್ದುಪಡಿ, ಜೀವಹಾನಿಯಾಗುವ ಕುಟುಂಬಕ್ಕೆ ಪರಿಹಾರ, ಹೆಚ್ಚುವರಿ ವೇತನ, ಪ್ರಯಾಣ ಭತ್ಯೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘ ಸರಕಾರದ ಮುಂದಿಟ್ಟಿದೆ ಎಂದರು.
ಶ್ರೀಕಾಂತ ಪಾಟೀಲ, ರವಿ ಕುಳ್ಳೊಳ್ಳಿ, ವಿಜಯಕುಮಾರ ದೇಶಮಾನೆ, ರವಿ ಚಲವಾದಿ, ಅಜಯ ಜ್ಯೋತಿ ಇತರರಿದ್ದರು.