This is the title of the web page
This is the title of the web page

Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

State News

ಬೆಳೆ ಹಾನಿಗೆ 50.01 ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿ

ಜಿ.ಪಂ ಮಾಸಿಕ ಕೆಡಿಪಿ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಇಲ್ಲಿಯವರೆಗೆ ಹಾನಿಯಾದ ರೈತರ ಬೆಳೆಗಳಿಗೆ ಸರಕಾರದಿಂದ ನಾಲ್ಕು ಹಂತಗಳಲ್ಲಿ ಒಟ್ಟು 50.01 ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿ ಪಾವತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಗಿರುವ ಜಿ.ಪಂ ಆಡಳಿತಾಧಿಕಾರಿ ಶಿವಯೋಗ ಕಳಸದ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಜರುಗಿದ ಸೆಪ್ಟೆಂಬರ ಮಾಹೆಯ ಜಿ.ಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಟ್ಟು 56916 ರೈತರ ಬೆಳೆಗಳು ಹಾನಿಗೊಳಗಾಗಿದ್ದು, ಈ ಪೈಕಿ 41723 ರೈತರಿಗೆ ಒಟ್ಟು 50.01 ಕೋಟಿ ರೂ.ಗಳ ಇನ್‍ಪುಟ್ ಸಬ್ಸಿಡಿ ಹಣ ಪಾವತಿಯಾಗಿರುತ್ತದೆ. ಮೊದಲನೇ ಹಂತದಲ್ಲಿ 773 ರೈತರಿಗೆ 1.12 ಕೋಟಿ ರೂ., ಎರಡನೇ ಹಂತದಲ್ಲಿ 12365 ರೈತರಿಗೆ 13.82 ಕೋಟಿ ರೂ., ಮೂರನೇ ಹಂತದಲ್ಲಿ 10630 ರೈತರಿಗೆ 13.46 ಕೋಟಿ ರೂ. ಹಾಗೂ ನಾಲ್ಕನೇ ಹಂತದಲ್ಲಿ 17955 ರೈತರಿಗೆ 21.59 ಕೋಟಿ ರೂ.ಗಳಷ್ಟು ಇನ್‍ಪುಟ್ ಸಬ್ಸಿಡಿ ಹಣ ಪಾವತಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಉಂಟಾದ ಅಕಾಲಿಕ ಮಳೆ ಹಾಗೂ ಪ್ರವಾಹದಿಂದಾದ ಕೃಷಿ, ತೋಟಗಾರಿಕೆ, ರೇಷ್ಮೆ, ರಸ್ತೆ, ಸೇತುವೆ, ಹೆಸ್ಕಾಂ, ಕೈಮಗ್ಗ, ಶಾಲಾ ಕೊಠಡಿ ಹಾನಿಯ ಮಾಹಿತಿ ಹಾಗೂ ಪರಿಹಾರ ಪಾವತಿ ಹಾಗೂ ದುರಸ್ಥಿ ಕೈಗೊಂಡ ಬಗ್ಗೆ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ರೈತರ ಇ-ಕೆವೈಸಿ ಶೇ.66 ರಷ್ಟು ಆಗಿದ್ದು, ನೂರಕ್ಕೆ ನೂರರಷ್ಟು ಆಗಬೇಕು. ಇದಕ್ಕಾಗಿ ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಸಹಕಾರ ಪಡೆಯುವಂತೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಅವರಿಗೆ ತಿಳಿಸಿದರು.

ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶೇ.75.21 ಮಾನವ ದಿನಗಳನ್ನು ಸೃಜೀಸಲಾಗಿದೆ. ಪ್ರತಿ ತಾಲೂಕಿಗೆ ಮಾದರಿ ಶಾಲೆ ನಿರ್ಮಾಣ, ನರ್ಸರಿ ಹಾಗೂ ಅಮೃತ ಸರೋವರ ಯೋಜನೆಯಡಿ ಜಿಲ್ಲೆಯಲ್ಲಿ 75 ಕೆರಗಳ ಅಭಿವೃದ್ದಿ ಕಾರ್ಯವನ್ನು ನರೇಗಾದಡಿ ಕೈಗೊಳ್ಳಲಾಗಿದೆ. ಸಮುದಾಯ ಕಾಮಗಾರಿಗಳಾದ ಶಾಲಾ ಆಟದ ಮೈದಾನ, ಶಾಲಾ ಶೌಚಾಲಯ, ಶಾಲಾ ಉದ್ಯಾನವನ, ಶಾಲಾ ಕಂಪೌಂಡ್ ನಿರ್ಮಾಣ ನರೇಗಾದಡಿ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ ಸಿಇಓ ಟಿ.ಭೂಬಾಲನ್ ತಿಳಿಸಿದರು. ಜಲ ಜೀವನ ಮಿಷನ್ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎರಡು ಸರಕಾರಿ ಗೋಶಾಲೆ ಸ್ಥಾಪನೆಗೆ ಮಂಜೂರಾಗಿದ್ದು, ಒಂದು ರಬಕವಿಯಲ್ಲಿ ಇನ್ನೊಂದು ಕೂಡಲಸಂಗಮದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ರಬಕವಿಯಲ್ಲಿ ಲಭ್ಯವಿರುವ ಸರ್ಕಾರಿ ಖಾಲಿ ಜಾಗೆಯಲ್ಲಿ ನಿರ್ಮಿಸಲಾಗುತ್ತಿದೆ. ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಗೆ 13 ಸಂಚಾರಿ ವಾಹನ ನೀಡಿದ್ದು, ಸದ್ಯದಲ್ಲಿಯೇ ಕಾರ್ಯಾರಂಭಗೊಳ್ಳಲಿವೆ. ಪುಣ್ಯಕೋಟಿ ದತ್ತು ಯೋಜನೆಯಡಿ 10 ಖಾಸಗಿ ಗೋಶಾಲೆಗಳಲ್ಲಿರುವ 1194 ಜಾನುವಾರುಗಳ ವಿವರಗಳನ್ನು ಈ ಯೋಜನೆಯ ಪೋರ್ಟಲ್‍ನಲ್ಲಿ ದಾಖಲಿಸಲಾಗಿದೆ. ಇತರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಿಬ್ಬಂದಿ ಕೊರತೆ ಇರುವುದಾಗಿ ಸಭೆಗೆ ತಿಳಿಸಿದರು.

ತೋಟಗಾರಿಕೆ ವಿವಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪಿಜಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಮಂಜೂರಾಗಿದೆ. ಅಲ್ಲದೇ ಎರಡು ಪೋಸ್ಟ ಮೆಟ್ರಿಕ್ ವಸತಿ ನಿಲಯ ಮಂಜೂರಾಗಿವೆ. ಎಲ್ಲ ವಸತಿ ನಿಲಯಗಳಿಗೂ ನಿವೇಶನ ಇರುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಮರಟ್ಟಿ ತಿಳಿಸಿದರೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಚವ್ಹಾಣ 17 ವಸತಿ ನಿಲಯಗಳ ಕಟ್ಟಡ ನಿರ್ಮಾಣ ಪೈಕಿ ಒಂದಕ್ಕೆ ಅನುದಾನ ಬಿಡುಗಡೆಯಾಗಿದ್ದು, ಗೃಹ ಮಂಡಳಿಗೆ ವಹಿಸಲಾಗಿದೆ ಎಂದರು. ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿ.ಪಂ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಉಪವಿಭಾಗಾಧಿಕಾರಿಗಳಾದ ಸಿದ್ದು ಹುಲ್ಲೊಳ್ಳಿ, ಶ್ವೇತಾ ಬೀಡಿಕರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

Nimma Suddi
";