ಬೆಂಗಳೂರು: ರಾಜ್ಯಾದ್ಯಂತ ಅಂಗಡಿ, ಮುಂಗಟ್ಟು ಸೇರಿದಂತೆ ಯಾವುದೇ ಸಂಸ್ಥೆಗಳ ನಾಮಫಲಕದಲ್ಲೂ ಶೇ. 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ರಾಜ್ಯ ಸರ್ಕಾರ ಹೇಳಿದೆ ಎಂದು ಮಾಹಿತಿ ತಿಳಿದು ಬಂದಿದೆ.
ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಮಾಡಲು ಫೆಬ್ರವರಿ 29ರವರೆಗೆ ಡೆಡ್‌ಲೈನ್ ಕೊಡಲಾಗಿದ್ದು, ಇನ್ನೆರಡು ವಾರಗಳ ಕಾಲ ವಿಸ್ತರಣೆ ಮಾಡಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದರು.
ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಈ ವಿಚಾರವನ್ನು ಮನಗಂಡ ಸರ್ಕಾರ ಡೆಡ್‌ಲೈನ್ ವಿಸ್ತರಣೆ ಮಾಡುವ ತೀರ್ಮಾನ ಕೈಗೊಂಡಿದೆ.
ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಬೋರ್ಡ್‌ಗಳಲ್ಲಿ ಕನ್ನಡ ಅಳವಡಿಕೆ ಮಾಡಲು ಇನ್ನೂ ಎರಡು ವಾರಗಳ ಕಾಲ ಕಾಲಾವಕಾಶ ಸಿಕ್ಕಿದಂತಾಗಿದೆ.2022ರ ಕನ್ನಡ ಭಾಷೆ ಸಮಗ್ರ ಅಭಿವೃದ್ದಿ ಕಾಯ್ದೆ ಪ್ರಕಾರ ರಾಜ್ಯದ ಎಲ್ಲ ವಾಣಿಜ್ಯ, ಕೈಗಾರಿಕೆ, ಉದ್ಯಮ, ಟ್ರಸ್ಟ್, ಆಸ್ಪತ್ರೆ, ಪ್ರಯೋಗಾಲಯ, ಹೋಟೆಲ್, ಅಂಗಡಿ – ಮುಂಗಟ್ಟುಗಳಲ್ಲಿ, ಕಚೇರಿಗಳ ಬೋರ್ಡ್‌ಗಳಲ್ಲಿ ಶೇ. 60 ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು.
ಇನ್ನು ಕನ್ನಡವನ್ನು ನಾಮಫಲಕಗಳಲ್ಲಿ ಪ್ರಧಾನವಾಗಿ ಬಿಂಬಿಸಬೇಕು. ಇಂಗ್ಲಿಷ್ ಅಥವಾ ಬೇರೆ ಭಾಷೆಗಿಂತಲೂ ಮೇಲೆ ಇರಬೇಕು, ಈ ಮೂಲಕ ಸ್ಥಳೀಯ ಭಾಷೆಯನ್ನು ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಹೆಚ್ಚಾಗಿ ಬಳಸಲು ಅನುವು ಮಾಡಿಕೊಡಬೇಕು ಎಂದು ಕಾಯ್ದೆ ಹೇಳುತ್ತದೆ.