ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಾದ್ಯಾಂತ ಕೊರೊನಾ ಹಿನ್ನೆಲೆಯಲ್ಲಿ ರೈತರನ್ನು ಭೇಟಿ ಮಾಡಿ ಮಾಹಿತಿ ಹಾಗೂ ತರಬೇತಿ ನೀಡಲು ಅಸಾಧ್ಯವಾಗಿದ್ದರಿಂದ ರೈತರಿಗಾಗಿಯೇ ಹಮ್ಮಿಕೊಂಡ ಆನ್‌ಲೈನ್ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ.ಚೇತನಾ ಪಾಟೀಲ ತಿಳಿಸಿದ್ದಾರೆ.
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ರೈತರಿಗೆ ಮುಂಗಾರು ಹಂಗಾಮಿನ ಪೂರ್ವದಲ್ಲಿ ಉಪಯುಕ್ತವಾಗುವ ವಿಷಯಗಳ ಕುರಿತು ಆನ್‌ಲೈನ್ ಮೂಲಕ ೬೯ ತರಬೇತಿ ಕಾರ್ಯಕ್ರಮ ನೀಡಲಾಗಿದೆ ಎಂದು ಹೇಳಿದ್ದಾರೆ.
ಮೇ ೧೭ರಿಂದ ಇಲ್ಲಿವರೆಗೆ ಎಲ್ಲ ತಾಲೂಕಿನಿಂದ ೬೯ ತರಬೇತಿ ಹಮ್ಮಿಕೊಂಡಿದ್ದು, ರೈತರಿಗೆ ಮಣ್ಣು ಪರೀಕ್ಷೆ, ಮಣ್ಣು ಮಾದರಿ ಸಂಗ್ರಹಣೆ, ನಾನಾ ಬೆಳೆಗಳಲ್ಲಿ ಬೀಜೋಪಚಾರ ಮತ್ತು ಜೈವಿಕ ಗೊಬ್ಬರಗಳ ಬಳಕೆ ಹಾಗೂ ಮಹತ್ವ, ಸಾವಯವ ಕೃಷಿಯಲ್ಲಿ ಸಸ್ಯಮೂಲ ಕೀಟನಾಶಕಗಳ ಬಳಕೆ, ಕಬ್ಬು ಬೆಳೆಯ ಹೆಚ್ಚಿನ ಇಳುವರಿಗಾಗಿ ನೂತನ ತಂತ್ರಜ್ಞಾನಗಳ ಅಳವಡಿಕೆ, ಮುಂಗಾರು ಹಂಗಾಮಿನ ಬೆಳೆಯ ಪ್ರಮುಖ ರೋಗಗಳು ಹಾಗೂ ಸಮಗ್ರ ನಿರ್ವಹಣೆ ಕ್ರಮಗಳು, ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಮುಂತಾದ ವಿಷಯಗಳ ಕುರಿತು ತರಬೇತಿ ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ಈವರೆಗೆ ೪,೫೪೭ ರೈತರು ಭಾಗವಹಿಸಿ, ತರಬೇತಿಯ ಮಾಹಿತಿ ಪಡೆದಿರುತ್ತಾರೆ. ಪ್ರತಿ ತಾಲೂಕಿನಲ್ಲಿ ಬೆಳೆಯುವ ಆಯಾ ಬೆಳೆಗನುಸಾರವಾಗಿ ರೈತರಿಗೆ ಮಾಹಿತಿ ಒದಗಿಸುವ ತರಬೇತಿ ಆಯೋಜಿಸಿದ್ದು, ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ. ಇನ್ನೂ ಹೆಚ್ಚಿನ ತರಬೇತಿಗಳನ್ನು ಆನ್‌ಲೈನ್ ಮುಖಾಂತರ ಆಯೋಜಿಸಲಾಗುತ್ತಿದ್ದು, ಸಮಸ್ತ ರೈತ ಬಾಂಧವರು ತರಬೇತಿಯ ಪ್ರಯೋಜನ ಪಡೆಯಬೇಕೆಂದು ಆತ್ಮ ಯೋಜನೆಯ ಯೋಜನಾ ನಿರ್ದೇಶಕ ಡಾ.ಎಸ್.ಬಿ.ಕೊಂಗವಾಡ ಹಾಗೂ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.