This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

24 ರಂದು 6ನೇ ತರಗತಿಗೆ ಪ್ರವೇಶ ಪರೀಕ್ಷೆ

ಸುಸೂತ್ರವಾಗಿ ಪರೀಕ್ಷೆ ನಡೆಸಲು ಡಿಸಿ ರಾಜೇಂದ್ರ ಸೂಚನೆ
ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ, ಇಂದಿರಾಗಾಂಧಿ ವಸತಿ ಶಾಲೆಗಳ 2020ನೇ ಸಾಲಿನ 6ನೇ ತರಗತಿ ಪ್ರವೇಶಕ್ಕೆ ಫೆಬ್ರವರಿ 24 ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‍ನಲ್ಲಿಂದು ಜರುಗಿದ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಎಂಟು ತಾಲೂಕಾ ಕೇಂದ್ರದಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, 9048 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆಯಲ್ಲಿ 2 ಕೇಂದ್ರದಲ್ಲಿ 1056 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದರೆ, ಜಮಖಂಡಿಯಲ್ಲಿ 2 ಪರೀಕ್ಷಾ ಕೇಂದ್ರದಲ್ಲಿ 1032, ಬಾದಾಮಿ 3 ಕೇಂದ್ರದಲ್ಲಿ 1464, ಮುಧೋಳ 4 ಕೇಂದ್ರದಲ್ಲಿ 1896, ಬೀಳಗಿ 5 ಕೇಂದ್ರಗಳಲ್ಲಿ 1584, ಹುನಗುಂದ 2 ಕೇಂದ್ರಗಳಲ್ಲಿ 768, ಇಲಕಲ್ಲ 2 ಕೇಂದ್ರಗಳಲ್ಲಿ 432 ಹಾಗೂ ಬನಹಟ್ಟಿ 2 ಕೇಂದ್ರಗಳಲ್ಲಿ 816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ಕಾರ್ಯಕ್ಕೆ ನೇಮಕಗೊಂಡ ಉಪ ಮುಖ್ಯ ಅಧೀಕ್ಷಕ, ವೀಕ್ಷಕರ, ಪ್ರಶ್ನೆ ಪತ್ರಿಕೆಗಳ ವಿತರಕರ ತಂಡ, ಪ್ರಶ್ನೆ ಪತ್ರಿಕೆ ಪಾಲಕರು ಮತ್ತು ಕಸ್ಟೋಡಿಯನ್, ಖಜಾನೆ ಇಲಾಖೆಯ ಅಧಿಕಾರಿಗಳು ತಮಗೆ ವಹಿಸಿದ ಕರ್ತವ್ಯವನ್ನು ಜವಾಬ್ದಾರಿಯಿಂದ ಮಾಡಬೇಕು. ಪರೀಕ್ಷಾ ಕೇಂದ್ರಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆಗೆ ಕ್ರಮವಹಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತ 144 ಕಲಂ ದಡಿ ನಿಷೇಧಿತ ಪ್ರದೇಶವೆಂದು ಘೋಷಿಸಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಆಯುಕ್ತರಿಂದ ಪ್ರಮಾಣಿತ ಕಾರ್ಯಾಚರಣಾ ವಿಧಾನ ಸಿದ್ದಪಡಿಸಲಾಗಿದ್ದು, ಪರೀಕ್ಷಾ ಮುನ್ನಾದಿನ ಹಾಗೂ ಪರೀಕ್ಷೆ ದಿನಗಳಂದು ಪರೀಕ್ಷಾ ಕೊಠಡಿಗಳನ್ನು ಸೋಂಕು ನಿವಾರಕ ದ್ರಾವನ ಸಿಂಪಡಿಸಿ ಸ್ಯಾನಿಟೈಜರ್ ಮಾಡಲು ತಿಳಿಸಿದರು. ಪ್ರತಿ ಪರೀಕ್ಷಾ ಕೇಂದ್ರದ ಮುಂದೆ ಆರೋಗ್ಯ ತಪಾಸಣೆ ಕೇಂದ್ರವನ್ನು ಸ್ಥಾಪಿಸಿ, ಆರೋಗ್ಯ ಇಲಾಖೆಯಿಂದ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಹಾಗೂ ತುರ್ತು ಕಾರ್ಯಕ್ಕಾಗಿ ಜಿಲ್ಲಾ ಹಾಗೂ ತಾಲೂಕಾ ಕೇಂದ್ರದಲ್ಲಿ ಒಂದು ಅಂಬುಲೆನ್ಸ್ ಸಿದ್ದವಾಗಿರುವಂತೆ ಕ್ರಮಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿಗೆ ಸೂಚಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಶಿಧರ ಪೂಜಾರಿ ಮಾತನಾಡಿ ಜಿಲ್ಲೆಯಲ್ಲಿ ಒಟ್ಟು 29 ವಸತಿ ಶಾಲೆಗಳಿದ್ದು, ಅದರಲ್ಲಿ ಮೊರಾರ್ಜಿ ದೇಸಾಯಿ 16, ಕಿತ್ತೂರ ರಾಣಿ ಚೆನ್ನಮ್ಮ 5, ಅಟಲ್‍ಬಿಹಾರಿ ವಾಜಪೇಯಿ 1, ಡಾ.ಬಿ.ಆರ್.ಅಂಬೇಡ್ಕರ 4, ಇಂದಿರಾ ಗಾಂದಿ ವಸತಿ ಶಾಲೆಗಳು 3 ಇವೆ. ಈ ಎಲ್ಲ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಮಧ್ಯಾಹ್ನ 2.30 ರಿಂದ ಸಂಜೆ 4.50 ವರೆಗೆ ಜರುಗಲಿದೆ ಎಂದು ತಿಳಿಸಿದರು. ಅಲ್ಲದೇ ಪರೀಕ್ಷೆಗೆ ಕೈಗೊಂಡ ಸಿದ್ದತೆಗಳ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಉಪ ವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರ, ಪರೀಕ್ಷಾ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

ಪ್ರವೇಶ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಜಿಲ್ಲೆಯಲ್ಲಿ ಫೆಬ್ರವರಿ 24 ರಂದು ವಿವಿಧ ವಸತಿ ಶಾಲೆಗಳ ಪ್ರವೇಶಾತಿಗೆ ಜರುಗಲಿರುವ ಪ್ರವೇಶ ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ದೃಷ್ಠಿಯಿಂದ ಸಿಆರ್‍ಪಿಸಿ ಕಲಂ 144ರಡಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಒಳ ಪ್ರವೇಶವನ್ನು ನಿರ್ಭಂಧಿಸಿ ಮತ್ತು ಆ ವ್ಯಾಪ್ತಿಯಲ್ಲಿ ಪರೀಕ್ಷಾ ಅವಧಿಯಲ್ಲಿ ಝರಾಕ್ಸ್ ಅಂಗಡಿಗಳನ್ನು ಮುಚ್ಚತಕ್ಕದೆಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

Nimma Suddi
";