ಕಲಬುರಗಿ: ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಶಾಲೆ, ಕಾಲೇಜುಗಳಲ್ಲಿ 18 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ತಂಡ ನಡೆಸಿದ ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಜಿಲ್ಲೆಯಲ್ಲಿ 827 ಮಕ್ಕಳಿಗೆ ಹುಟ್ಟಿನಿಂದಲೇ ಹೃದಯ ಸಮಸ್ಯೆ, 860 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಎಲ್ಲ ಸರಕಾರಿ ಅನುದಾನಿತ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ಆರ್‌ಬಿಎಸ್‌ಕೆ ತಂಡದವರು ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿದ್ದು, ಇದರಿಂದ ಜಿಲ್ಲೆಯ ಶಾಲಾ ಕಾಲೇಜು ಮಕ್ಕಳಲ್ಲಿ ವಿವಿಧ ರೋಗಗಳು ಇರುವ ಬಗ್ಗೆ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಹುಟ್ಟಿನಿಂದಲೇ ಹೃದಯ ಸಮಸ್ಯೆ ಇರುವುದು, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಮಕ್ಕಳಿಗೆ ಚಿಕಿತ್ಸೆ ದೊರೆತಿಲ್ಲ. ಇದರಿಂದ ಆರ್‌ಬಿಎಸ್‌ಕೆ ಗುರುತಿಸಿದ್ದು, ಈ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆ ನೀಡಲು ಮುಂದಾಗಿದೆ.
ಜಿಲ್ಲೆಯಲ್ಲಿ ಒಟ್ಟು 5,42,600 ಮಕ್ಕಳನ್ನು ತಪಾಸಣೆಯ ಟಾರ್ಗೆಟ್ ಹೊಂದಲಾಗಿತ್ತು. ಇದರಲ್ಲಿ4,92,054 ಮಕ್ಕಳನ್ನು ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಸ್ಕ್ರೀನಿಂಗ್ ಮಾಡಲಾಗಿದ್ದು, ಇದರಲ್ಲಿ ವಿವಿಧ ರೀತಿಯ ಕಾಯಿಲೆಗಳು ಪತ್ತೆಯಾಗಿದೆ ಎಂದು ಮಾಹಿತಿ ಕಂಡು ಬಂದಿದೆ.