*ಆಧುನಿಕ ಜೀವನಕ್ಕೆ ಯೋಗ ಅಗತ್ಯ : ರಾಜೀವ್ ಚಂದ್ರಶೇಖರ*
ನಿಮ್ಮ ಸುದ್ದಿ ಬಾಗಲಕೋಟೆ
ಯೋಗ ನಮ್ಮ ದೇಶದ ಸಂಸ್ಕøತಿಯ ಪ್ರತೀಕವಾಗಿದ್ದು, ಅನಾದಿ ಕಾಲದಿಂದಲೂ ಬಂದಿರುವ ಯೋಗವು ಇಂದಿನ ಆಧುನಿಕ ಜೀವನಕ್ಕೆ ಅಗತ್ಯವಾಗಿದೆ ಎಂದು ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಶೀಲತೆ ಸಚಿವಾಲಯದ ರಾಜ್ಯ ಮಂತ್ರಿಗಳಾದ ರಾಜೀವ್ ಚಂದ್ರಶೇಖರ ಹೇಳಿದರು.
ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣ ಪಟ್ಟದಕಲ್ಲಿನಲ್ಲಿ ಮಂಗಳವಾರ ಭಾರತ ಸರಕಾರದ ಆಯುಷ ಮಂತ್ರಾಲಯ, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತೆ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪಟ್ಟದಕಲ್ಲ ಗ್ರಾ.ಪಂ ಸಹಯೋಗದಲ್ಲಿ ಹಮ್ಮಿಕೊಂಡ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಮೃತ ಮಹೋತ್ಸವ ಆಚರಣೆ ಸಮಯದಲ್ಲಿ ನಡೆಯುತ್ತಿರುವ ಯೋಗ ದಿನವನ್ನು 75 ಇತಿಹಾಸ ಪ್ರಸಿದ್ದ ಪಾರಂಪರಿಕ ತಾಣಗಳಲ್ಲಿ ಆಚರಿಸಲಾಗುತ್ತಿದೆ. ಈ ಪೈಕಿ ರಾಜ್ಯದ ಮೈಸೂರು ಜೊತೆಗೆ ಪಟ್ಟದಕಲ್ಲು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಯೋಗವನ್ನು ಒಂದು ದಿನದ ಬದಲಾಗಿ ಉತ್ತಮ ಆರೋಗ್ಯಕ್ಕಾಗಿ ನಿತ್ಯವೂ ಮಾಡಬೇಕು ಎಂದರು.
ನಮ್ಮ ದೇಶದ ಸಂಸ್ಕøತಿಯ ಪ್ರತೀಕವಾಗಿದ್ದು, ಯೋಗವನ್ನು ಅಂತಾರಾಷ್ಟ್ರೀಯ ದಿನವಾಗಿ ಆಚರಿಸುವಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನ ಶ್ಲಾಘನೀಯವಾದುದು. ಇಂದಿನ ಯೋಗ ಕಾರ್ಯಕ್ರಮದಲ್ಲಿ ಜಗತ್ತಿನ 15 ಸಾವಿರ ಕೋಟಿ ಜನ ಭಾಗವಹಿಸುತ್ತಿದ್ದಾರೆ. ಇದು ಯೋಗದ ತಾಕತ್ತು. ಆದ್ದರಿಂದ ಯೋಗ ಪ್ರತಿಯೊಬ್ಬರ ಜೀವನದ ಭಾಗವವಾಗಬೇಕು ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಪ್ರಧಾನಿ ಮೋದಿ ಅವರು ನಮ್ಮ ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚರಿಸುವ ಮೂಲಕ ದೇಶದ ಗೌರವವನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಅಮೃತಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಯೋಗವನ್ನು ಐತಿಹಾಸಿಕ ಪ್ರವಾಸಿ ತಾಣ ಪಟ್ಟದಕಲ್ಲು ಸೇರಿದಂತೆ 75 ಕಡೆಗಳಲ್ಲಿ ಆಚರಿಸಲಾಗುತ್ತಿದೆ. ಪಟ್ಟದಕಲ್ಲು ಈ ಗೌರವಕ್ಕೆ ಪಾತ್ರವಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಪಟ್ಟದಕಲ್ಲ ಗ್ರಾ.ಪಂ ಅಧ್ಯಕ್ಷ ಎಸ್.ಆರ್.ತೋಟಗೇರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಎಲೇಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡೈರೆಕ್ಟರ ಜನರಲ್ ಅರವಿಂದ ಕುಮಾರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ, ಯುಕೆಪಿಯ ಮಹಾವ್ಯವಸ್ಥಾಪಕ ಸ್ನೇಹಲ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.