ಯೋಜನೆಯೊಂದಿಗೆ ಕೃಷಿ ಚಟುವಟಿಕೆ ಕೈಗೊಳ್ಳಿ
ನಿಮ್ಮ ಸುದ್ದಿ ಬಾಗಲಕೋಟೆ
ರೈತ ದಿನ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಪ್ರಗತಿಪರ ರೈತ ವಿ.ಜಿ.ಕೂಡಲಗಿಮಠ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿಯ ತೋಟಗಾರಿಕೆ ರೈತ ಉತ್ಪಾದಕ ಸಂಸ್ಥೆಯಲ್ಲಿ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏಷ್ಯಾದಲ್ಲೇ ಅತಿ ಹೆಚ್ಚು ನೀರಾವರಿ ಪ್ರದೇಶ ಹುನಗುಂದ ತಾಲೂಕಿನಲ್ಲಿದೆ. ಅಂದಾಜು ೮೪ ಸಾವಿರ ಎಕರೆ ನೀರಾವರಿ ಪ್ರದೇಶವಿದ್ದು ರೈತರು ಸೂಕ್ತ ಯೋಜನೆಯೊಂದಿಗೆ ಬೆಳೆ ಬೆಳೆಯುವಂತಾಗಬೇಕು ಎಂದರು.
ರೈತರ ಒಡನಾಡಿ ಆಗಿರುವ ಇಲ್ಲಿನ ರೈತ ಉತ್ಪಾದಕ ಸಂಸ್ಥೆ ರೈತರಿಗೆ ಹಲವು ಅನುಕೂಲ ಮಾಡಿಕೊಟ್ಟಿದೆ. ಇಲ್ಲಿನ ರವಿ ಸಜ್ಜನರ್ ಅವರಿಗೆ ಕೃಷಿ ಬಗ್ಗೆ ಅಪಾರ ಪ್ರೀತಿಯಿದೆ. ಕೃಷಿ ಕ್ಷೇತ್ರದ ಪ್ರತಿ ಅಂಶಗಳನ್ನು ನಾನಾ ಕಡೆ ಭೇಟಿ ಮೂಲಕ ಹೆಚ್ಚಿನ ಮಾಹಿತಿ ರವಿ ಅವರಿಗಿದೆ. ಅವರ ಸಲಹೆ, ಮಾರ್ಗದರ್ಶನದೊಂದಿಗೆ ರೈತರು ಮುಂದೆ ಸಾಗಿ. ರೈತರು ರಾಜಕೀಯ ಮರೆತು ತಾನೊಬ್ಬ ಕೃಷಿಕನಾಗಿ ಈ ಸಮಾಜ ಹಾಗೂ ದೇಶಕ್ಕೆ ಏನು ಕೊಡಬಲ್ಲೆ ಎಂಬುದರ ಬಗ್ಗೆ ಚಿಂತಿಸಿ. ಸಂಸ್ಥೆಯ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಹುನಗುಂದ ತಾಲೂಕನ ಹೆಸರು ಮೂಡಿಸಿದೆ. ಈ ಭಾಗದಲ್ಲಿ ಮೊದಲು ಮೆಣಸಿಕಾಯಿ ಬೆಳೆ ಅಲ್ಪ ಸ್ವಲ್ಪ ಕಾಣಿಸುತ್ತಿತ್ತು. ಸದ್ಯ ಎಲ್ಲಿ ನೋಡಿದರು ಮೆಣಸಿನಕಾಯಿ ಕಾಣಿಸುತ್ತದೆ. ಅದಕ್ಕೆ ಹುನಗುಂದ ತೋಟಗಾರಿಕೆ ಸಂಸ್ಥೆ ಮತ್ತು ರವಿ ಸಜ್ಜನರ ಕಾರಣರಾಗಿದ್ದಾರೆ ಎಂದು ಹೇಳಿದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ, ರೈತ ಉತ್ಪಾದಕ ಸಂಸ್ಥೆ ರೈತರ ಏಳಿಗಾಗಿ ಶ್ರಮಿಸುತ್ತಿದೆ. ಎಲ್ಲಾ ಬೆಳೆಗಳಿಗೆ ಸುಭದ್ರÀ ಮಾರುಕಟ್ಟೆ ಹೊಂದಿಸಿದೆ. ರೈತರಿಗೆ ತಾಂತ್ರಿಕತೆ ಅಳವಡಿಸಲು ಹಾಗೂ ಮುಂದಿನ ದಿನಗಳಲ್ಲಿ ಎಲ್ಲ ಹೋಬಳಿಗೊಂದು ಮಣ್ಣು ಪರೀಕ್ಷೆ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಪ್ರಗತಿಪರ ರೈತರಾದ ಮಾದಾಪುರದ ಬಸವರಾಜ ಹುಲ್ಲಿಕೇರಿ, ನಾಗೂರಿನ ಹೊಳಿಯಪ್ಪ ಗೌಡರ ಹಾಗೂ ಅಂಬಲಿಕೊಪ್ಪದ ಹೊಳಿಯಪ್ಪ ಗೌಡರ ಅವರನ್ನು ಸನ್ಮಾನಿಸಲಾಯಿತು.
ಜುವಾರಿ ಸಂಸ್ಥೆ ಮುಖ್ಯಸ್ಥ ಗಿರೀಶ, ಸಿದ್ದಲಿಂಗಪ್ಪ ಕೋರಿ, ತೋಟಗಾರಿಕೆ ಅಕಾರಿ ನಿಂಗಪ್ಪ ಕಿರಸುರ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಕಾರಿ ಧೂಳಪ್ಪ ದಮದಡ್ಡಿ, ಪ್ರಗತಿಪರ ರೈತ ರವಿ ಸಜ್ಜನರ, ಶಂಕರಗೌಡ ಹಲಗತ್ತಿ, ನಿಂಗಪ್ಪ ಕೋನನ್ನವರ, ಸಂಗಮೇಶ ಹವಳಗಿ, ವಿಠಲ್ ಕುಂಬಾರ ಇತರರು ಇದ್ದರು.