ಎಲ್ಲೆಡೆ ಶಂಭೂಕೋ ಘೋಷಣೆ
ನಿಮ್ಮ ಸುದ್ದಿ ಬಾಗಲಕೋಟೆ
ಉತ್ತರ ಕರ್ನಾಟಕ ಪ್ರಮುಖ ಧಾರ್ಮಿಕ ಕ್ಷೇತ್ರ ಹಾಗೂ ಅಧಿದೇವತೆ ಬಾದಾಮಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿದೆ.
ಜಿಲ್ಲೆಯ ಐತಿಹಾಸಿಕ ಬಾದಾಮಿ ಬನಶಂಕರಿದೇವಿ ಮಹಾರಥೋತ್ಸವ ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಪ್ರತಿವರ್ಷ ಬನದ ಹುಣ್ಣಿಮೆಯಂದು ಬಾದಾಮಿ ಬನಶಂಕರಿ ದೇವಿ ಮಹಾರಥೋತ್ಸವವನ್ನು ಲಕ್ಷಾಂತರ ಭಕ್ತರು ಹರ್ಷೋದ್ಘಾರದೊಂದಿಗೆ ಎಳೆಯುತ್ತಿದ್ದರು. ಆದರೆ ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬನಶಂಕರಿ ದೇವಿ ಜಾತ್ರೆ ರದ್ದುಗೊಳಿಸಿತ್ತು. ಆದರೆ ಭಕ್ತರ ಒತ್ತಾಯದ ಮೇರೆಗೆ ಈ ಬಾರಿ ಸರಳ, ಸಂಭ್ರಮದಿಂದ ಮಹಾರಥೋತ್ಸವ ಎಳೆದರು. ಈ ವೇಳೆ ಸೇರಿದ್ದ ಸಾವಿರಾರು ಭಕ್ತರು ಉತ್ತತ್ತಿ, ಬಾಳೆಹಣ್ಣು ಸಮರ್ಪಿಸಿ ಭಕ್ತಿಭಾವ ಮೆರೆದರು.
ಪ್ರತಿ ವರ್ಷ ಜಾತ್ರೆ ಅಂಗವಾಗಿ ತಿಂಗಳ ಪರ‍್ಯಂತ ನಡೆಯುತ್ತಿದ್ದ ನಾಟಕ ಪ್ರದರ್ಶನ, ನಾನಾ ವಸ್ತುಗಳನ್ನು ಜನತೆ ಖರೀದಿಸಲು ಮುಂದಾಗುತ್ತಿದ್ದರು. ನಾಟಕ ನೋಡಿ ಜಾತ್ರೆಯ ಸವಿ ಸವಿಯುತ್ತಿದ್ದರು. ಆದರೆ ಈ ಬಾರಿಯ ಕೊರೊನಾ ಮಹಾಮಾರಿಯಿಂದಾಗಿ ನಾಟಕ ಪ್ರದರ್ಶನ ರದ್ದಾಗಿದೆ. ಹೀಗಾಗಿ ಈ ಬಾರಿಯ ಕಲಾವಿದರ ಬದುಕು ಹಾಗೂ ಜಾತ್ರೆ ಸಂಭ್ರವನ್ನೆಲ್ಲ ಮಹಾಮಾರಿ ಕೊರೊನಾ ಕಸಿದುಕೊಂಡAತಾಗಿದೆ.
ಕೊರೊನಾ ಮುನ್ನೆಚ್ಚರಿಕೆಯಂತೆ ಜಿಲ್ಲಾಡಳಿತ ಒಂದೂವರೆ ತಿಂಗಳ ಹಿಂದಿಯೇ ಜಾತ್ರೆ ನಿಷೇಧಿಸಿ ಕಳೆದ ೧೫ ದಿನಗಳಿಂದ ದೇಗುಲ ಬಂದ್ ಮಾಡಿತ್ತು. ಆದರೆ ಸರಳ ಹಾಗೂ ಸಂಪ್ರದಾಯದಂತೆ ದೇವಸ್ಥಾನದ ಅರ್ಚಕರು ಸೇರಿ ಜಾತ್ರೆಯ ವಿಧಿವಿಧಾನಗಳಿಗೆ ಅವಕಾಶ ಕಲ್ಪಿಸಿತ್ತು. ಆದರೆ ಭಕ್ತರು ಮಾತ್ರ ಜಿಲ್ಲಾಡಳಿತದ ಆದೇಶಕ್ಕೆ ಅಪಸ್ವರ ಎತ್ತಿ, ನಿನ್ನೆ, ಬೆಳಿಗ್ಗೆಯಿಂದಲೇ ದೂರದ ಊರಿನಿಂದ ಪಾದಯಾತ್ರೆ ಮೂಲಕ ದೇಗುಲದತ್ತ ಆಗಮಿಸಿದ್ದರು. ತಾಲೂಕಾಡಳಿತ, ದೇಗುಲ ಪ್ರವೇಶ ಬಂದ್, ಹಾಗೂ ಬ್ಯಾರಿಕೇಡ್ ಹಾಕಿ ಭಕ್ತರಿಗೆ ಬ್ರೇಕ್ ಹಾಕಿದರು.
ಬನಶಂಕರಿದೇವಿ ರಥಕ್ಕೆ ಹಗ್ಗವನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಭಕ್ತರು ತರುತ್ತಾರೆ. ಮಲಪ್ರಭಾ ನದಿಯಲ್ಲೇ ಹೊಳೆ ಬಂಡಿ ಮೂಲಕ ಜೈಕಾರದೊಂದಿಗೆ ಬಂಡಿಯನ್ನು ಎತ್ತುಗಳು ಮತ್ತು ಭಕ್ತರು ಎಳೆದು ತರೋದು ಸಂಪ್ರದಾಯ. ಅದರಂತೆ ಈ ವರ್ಷವೂ ಹರಿಯುವ ನದಿಯಲ್ಲೇ ಭಕ್ತರು ಹೊಳೆ ಬಂಡಿ ಓಡಿಸಿಕೊಂಡು ಬಂದರು. ಬಳಿಕ ದೇಗುಲದ ಆವರಣದಲ್ಲಿ ಮೆರವಣಿಗೆ ನಡೆಯಿತು.
ಜಾತ್ರೆ ನಿಮಿತ್ತ ಬನಶಂಕರಿ ದೇವಿಗೆ ವಿಶೇಷ ಅಲಂಕಾರ, ಪೂಜಾ ನಡೆದವು. ರಥೋತ್ಸವದ ಬಳಿಕ ಭಕ್ತರು ದೇಗುಲ ದರ್ಶನಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ಭಕ್ತರು ಹೊರಗಿನಿಂದಲೇ ಕಾಯಿ ಒಡೆದು ದರ್ಶನ ಪಡೆದು ಪುನೀತರಾದರು.
ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪುತ್ರ ಅರುಣ್ ಕಾರಜೋಳ, ಮಾಜಿ ಶಾಸಕ ಎಂ.ಕೆ.ಪಟ್ಣಣಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಹೊಳಬಸು ಶೆಟ್ಟರ್, ಎಂ.ಬಿ.ಹAಗರಗಿ, ಮಹೇಶ ಹೂಸಗೌಡರ ಸೇರಿದಂತೆ ಇತರರು ಭಾಗವಹಿಸಿದ್ದರು.