ಭಾವನೆಗಳ ಕಿಂದರಜೋಗಿಗೆ ಫೆ.೧೪ರಂದು ಸನ್ಮಾನ
ನಿಮ್ಮ ಸುದ್ದಿ ಬಾಗಲಕೋಟೆ
ಯುವಾ ಬ್ರಿಗೇಡ್ ವತಿಯಿಂದ ಫೆ.೧೪ರಂದು ಭಾವನೆಗಳನ್ನು ಹೊತ್ತು ತರುವ ಪೋಸ್ಟ್ಮನ್‌ಗಳ ಸೇವೆಗೆ ಗೌರವಕ್ಕಾಗಿ ಹಮ್ಮಿಕೊಂಡ ರಾಜ್ಯಮಟ್ಟದ ಸಮಾವೇಶದಲ್ಲಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಪ್ರತಿ ವರ್ಷ ಫೆ.೧೪ರಂದು ಪ್ರೇಮಿಗಳ ದಿನವಿದ್ದರೆ ಯುವಾ ಬ್ರಿಗೇಡ್ ಆ ದಿನವನ್ನು ಮೈ ಲವ್ ಮೈ ನೇಷನ್ ಥೀಮ್ ಅಡಿ ದೇಶಪ್ರೇಮಿಗಳನ್ನು ಗೌರವಿಸುವ ಕಾರ್ಯಕ್ರಮ ಆಯೋಜಿಸುತ್ತಿದೆ. ಕಳೆದ ಮರ‍್ನಾಲ್ಕು ವರ್ಷದಿಂದ ಪೊಲೀಸರು, ಪೌರಕಾರ್ಮಿಕರು, ಲೈನ್‌ಮನ್‌ಗಳು, ಯೋಧರ ಪತ್ನಿಯರು ಹೀಗೆ ಒಂದೊAದು ಕ್ಷೇತ್ರದಲ್ಲಿನ ದೇಶಪ್ರೇಮಿಗಳನ್ನು ಗೌರವಿಸುತ್ತಿದ್ದು ಈ ಬಾರಿ ಪೋಸ್ಟ್ಮನ್‌ಗಳನ್ನು ಗೌರವಿಸಲು ತೀರ್ಮಾನಿಸಲಾಗಿದೆ.
ಮೊಬೈಲ್, ಇ-ಮೇಲ್, ಇಂಟರನೆಟ್ ಕಾಲದಲ್ಲೂ ಜನರ ಪ್ರಮುಖ ಕೊಂಡಿಯಾಗಿ ಎಲ್ಲ ಸಮಾಚಾರಗಳಲ್ಲಿ ನಮ್ಮ ಸುಖದು:ಖಗಳ ಭಾಗವಾಗಿದ್ದೂ ತಾನು ಮಾತ್ರ ನಿರಪೇಕ್ಷ ಯೋಗ ಸಿದ್ಧಿಸಿಕೊಂಡವ ಅಂಚೆಯಣ್ಣ. ಗಡಿ ಕಾಯುವ ಸೈನಿಕನಿಂದ ಹಿಡಿದು ಅಡುಗೆ ಮನೆಯೊಳಗಿನ ಅಮ್ಮಂದಿರಿಗೆ ಎಲ್ಲರಿಗೂ ಅಣ್ಣನಾಗಿದ್ದವರು.
ಕೊರೊನಾ ಸಂಕಷ್ಟ ಕಾಲದಲ್ಲೂ ಇಡೀ ದೇಶವೇ ಲಾಕ್‌ಡೌನ್ ಆಗಿದ್ದ ವೇಳೆ ಪತ್ರಗಳನ್ನಷ್ಟೆ ಅಲ್ಲದೆ ಔಷಧಗಳನ್ನು ಮನೆಗಳಿಗೆ ತಲುಪಿಸುವ ಕೆಲಸ ಮಾಡಿದ್ದರು. ಹೀಗಾಗಿ ಪೋಸ್ಟ್ಮನ್‌ಗಳೂ ಸಹ ಒಂದು ರೀತಿಯಲ್ಲಿ ಕೊರೊನಾ ವಾರಿರ‍್ಸ್ಗಳಾಗಿದ್ದಾರೆ. ಹೀಗಾಗಿ ಅವರನ್ನು ಗೌರವಿಸುವುದಕ್ಕಾಗಿ ಯುವಾ ಬ್ರಿಗೇಡ್ ಭಾವನೆಗಳ ಕಿಂದರಜೋಗಿ ಎಂಬ ಬಹಿರಂಗ ಸಮಾವೇಶ ಹಮ್ಮಿಕೊಂಡಿದೆ.
ಫೆ.೧೪ರಂದು ಸೂಳೇಬಾವಿಯ ರಾಮಯ್ಯಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಸಂಜೆ ೫.೩೦ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಯುವಾ ಬ್ರಿಗೇಡ್ ಪ್ರಕಟಣೆ ತಿಳಿಸಿದೆ.