ನಿಮ್ಮ ಸುದ್ದಿ ಬಾಗಲಕೋಟೆ
ಕುರುಬ ಸಮುದಾಯಕ್ಕೆ ಮೀಸಲಾತಿ ದೊರಕಿಸುವ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ.
ನಗರದಲ್ಲಿ ಸುದ್ದಿಗಾಗರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಮೀಸಲಾತಿ ಕುರಿತು ನಾನೊಬ್ಬನೋ ಸಮಾಜದಲ್ಲಿ ತೀರ್ಮಾನ ತೆಗೆದುಕೊಂಡಿಲ್ಲ. ಸಮಾಜದ ಗುರುಗಳ ಅಣತಿಯಂತೆ ಮುನ್ನಡೆದಿದ್ದೇವೆ. ಮೀಸಲಾತಿ ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದ ಸಿದ್ದರಾಮಯ್ಯ ಅವರು ಹೋರಾಟ ನಡೆಸಿ ಎಂದಿದ್ದರು. ಆದರೆ ಬಾಗಲಕೋಟೆ ಸಮಾವೇಶದ ನಂತರ ನನ್ನನ್ನು ಕರೆದಿಲ್ಲ ಎಂದು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದರು.
ಬಡವರಿಗೆ ಮೀಸಲಾತಿ ದೊರೆಯಬೇಕು ಎಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸ್ವಾತಂತ್ರಾ ನಂತರ ಕೆಲವರು ಮಾತ್ರ ಅದರ ಲಾಭ ಪಡೆಯುತ್ತಿದ್ದಾರೆ. ಒತ್ತಡದ ಮೂಲಕ ಮೀಸಲಾತಿ ಪಡೆಯಲು ಆಗುವುದಿಲ್ಲ. ಎಲ್ಲ ಸಮಾಜದ ಸ್ವಾಮೀಜಿಗಳು ಧರಣಿ, ಉಪವಾಸ ಆರಂಭಿಸುತ್ತಾರೆ. ಅರ್ಹತೆಗೆ ತಕ್ಕಂತೆ ಮೀಸಲಾತಿ ದೊರೆತು ಎಲ್ಲ ವರ್ಗದ ಬಡ ಕುಟುಂಬಗಳಿಗೂ ಮೀಸಲಾತಿ ದೊರೆಯಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಮೀಸಲಾತಿ ನೀಡುವ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ನಿವೃತ್ತ ನ್ಯಾಯಮೂರ್ತಿಗಳಿಂದ ವರದಿ ಪಡೆಯಲು ತೀರ್ಮಾನಿಸಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಿಂದುಳಿದ ಜನಾಂಗಗಳು ಅರ್ಹತೆಗೆ ಆಧಾರವಾಗಿ ಮೀಸಲಾತಿ ದೊರೆಯಬೇಕು ಎಂಬುದು ಅಂಬೇಡ್ಕರ್ ಆಪೇಕ್ಷೆಯಾಗಿತ್ತು ಎಂದರು.