ನಿಮ್ಮ ಸುದ್ದಿ ಬಾಗಲಕೋಟೆ
ಒಂದು ಚಲನಚಿತ್ರ ಕೇವಲ ಮನರಂಜನೆಯ ಮಾಧ್ಯಮವಷ್ಟೇ ಅಲ್ಲ, ಬದಲಾಗಿ ಸಮಾಜಕ್ಕೆ ಮೌಲ್ಯ ನೀಡುವ ಒಂದು ಸಾಧನ ಎಂದು ಸಿದ್ಧಾರ್ಥ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಉಪನ್ಯಾಸಕ ನವೀನ.ಎನ್.ಜಿ., ಹೇಳಿದರು.
ನಗರದ ಬವಿವ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಲ್ಲಿ ಬರವಣಿಗೆ ಶೈಲಿ ಮತ್ತು ವಿಷಯಗಳ ಕುರಿತು ಆಳವಾದ ತಿಳಿವಳಿಕೆ ಇದ್ದರೂ ಸಂವಹನ ಕಲೆಯ ಕೊರತೆ ಇದೆ ಎಂದರು.
ಸಂವಹನ ಕಲೆಯ ಕೊರತೆ ಹೋಗಲಾಡಿಸಿದರೆ ಉತ್ತಮ ಭವಿಷ್ಯವಿದೆ. ಸತತ ಬರವಣಿಗೆ ಮತ್ತು ಓದು ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳು ಸಮಯಕ್ಕಾನುಸಾರವಾಗಿ ಹೊಸತನ ರೂಢಿಸಿಕೊಳ್ಳಬೇಕು. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಮಾನಗಳ ಕುರಿತು ಸಾಕಷ್ಟು ಅರಿತುಕೊಂಡಿರಬೇಕು. ಯಾವುದೂ ಗೊತ್ತಿಲ್ಲ ಎಂಬ ಉತ್ತರ ಮಾಧ್ಯಮ ವಿದ್ಯಾರ್ಥಿಗಳಿಂದ ಬರಬಾರದು. ಮುದ್ರಣ, ವಿದ್ಯುನ್ಮಾನ ಹಾಗೂ ನವಮಾಧ್ಯಮಗಳಲ್ಲಿನ ವೃತ್ತಿ ಬದುಕಿನ ಕುರಿತು ತಿಳಿದುಕೊಂಡಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿನೇಮಾ ಜಗತ್ತು ಹೊರ ನೋಟದಿಂದ ವರ್ಣರಂಜಿತವಾಗಿರುತ್ತದೆ. ಅಲ್ಲಿ ಕೇವಲ ಪರದೆಯ ಮೇಲಿನ ಕಲಾವಿದರನ್ನು ಕಾಣುತ್ತೇವೆ. ಆದರೆ ಚಲನಚಿತ್ರ ನಿರ್ಮಾಣದಲ್ಲಿ ಹಲವಾರು ವಿಭಾಗಗಳು ಕಾರ್ಯನಿರ್ವಹಿಸುತ್ತವೆ. ಇಲ್ಲಿ ಕೌಶಲ್ಯತೆಗೆ ಹೆಚ್ಚಿನ ಮೌಲ್ಯವಿದೆ. ಚಿತ್ರ ನಿರ್ಮಾಣದಲ್ಲಿ ನಿರ್ಮಾಣ ಪೂರ್ವ ಹಂತ, ನಿರ್ಮಾಣ ಹಂತ ಮತ್ತು ನಿರ್ಮಾಣೋತ್ತರ ಹಂತ. ಈ ಮೂರು ಹಂತಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಸಿನೇಮಾ ಕೇವಲ ಮನರಂಜನೆ ಮಾಧ್ಯಮವಲ್ಲ. ಅದರಿಂದ ಸಮಾಜಕ್ಕೆ ಎಲ್ಲ ಬಗೆಯ ಸಂದೇಶಗಳು ದೊರೆಯುತ್ತವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಚ್.ಪಾಟೀಲ, ಪ್ರೊ.ಎನ್.ಪಿ.ಜೋಶಿ, ಎನ್.ಆರ್.ಇಂಗಳಗಿ, ಪ್ರೊ.ಎಂ.ಪಿ.ಬಡಿಗೇರ, ಎಸ್.ಎಸ್.ಸರಡಗಿ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಇದ್ದರು.