ಉಪನ್ಯಾಸಕ ಹಾದಿಮನಿ ಕಿವಿಮಾತು
ನಿಮ್ಮ ಸುದ್ದಿ ಬಾಗಲಕೋಟೆ
ಶೈಕ್ಷಣಿಕ ಮೌಲ್ಯ ಬೆಳೆದಂತೆ ಮಾನವೀಯ ಮೌಲ್ಯಗಳು ಕಡಿಮೆ ಆಗುತ್ತಿವೆ ಎಂದು ನೂಲ್ವಿಯ ಎಸ್.ಜೆ.ಆರ್ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕ ಮಲ್ಲಿಕಾರ್ಜುನ ಹಾದಿಮನಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ೨೦೨೦-೨೧ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಮೌಲ್ಯಗಳು ಎತ್ತರಕ್ಕೆ ಸಾಗಿದಂತೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಶೇ.೯೦ಕ್ಕೂ ಹೆಚ್ಚು ಅಂಕ ಗಳಿಸಿ ಹೊರದೇಶದ ವ್ಯಾಮೋಹದೊಂದಿಗೆ ತಂದೆ-ತಾಯಿಯರನ್ನು ಪರಕೀಯರಂತೆ ನೋಡುವಂತಾಗಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಎನ್ನೆಸ್ಸೆಸ್‌ನಂತ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.
ಸಾಧನೆಯಿಲ್ಲದೆ ಮರಣ ಹೊಂದಿರೆ ಸಾವಿಗೆ ಅವಮಾನ. ಬದುಕಿನಲ್ಲಿ ಆದರ್ಶ ಹೊಂದಬೇಕು. ಶೈಕ್ಷಣಿಕ ಮೌಲ್ಯಗಳು ಎತ್ತರೆತ್ತರಕ್ಕೆ ಸಾಗಿದಂತೆ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂದಿನ ಶೇಕಡಾವಾರು ಫಲಿತಾಂಶಗಳು ಬುದ್ದಿ ಮಾತು ಹೇಳುತ್ತಿಲ್ಲ. ಅಂಕಗಳಿಗೆ ಜೋತು ಬೀಳದೆ ಸಮಾಜದಲ್ಲಿ ಬದುಕುವ ರೀತಿ ಕಲಿಯಿರಿ ಎಂದು ಹೇಳಿದರು.
ಉಪನ್ಯಾಸ ಶಿವಪ್ಪ ಎಚ್., ಮಾತನಾಡಿ, ವಿದ್ಯಾರ್ಥಿಗಳು ತಮಗೆ ತಾವು ಮೋಸ ಮಾಡಿಕೊಳ್ಳದೆ ಪಾಲಕರ ನಿರೀಕ್ಷೆಗೆ ತಕ್ಕಂತೆ ಬದುಕನ್ನು ಪ್ರೀತಿಸುವಂತಾಗಬೇಕು. ಗ್ರಾಮೀಣ ಜನರ ಬದುಕು ಉನ್ನತೀಕರಣಗೊಳ್ಳಲು ೧೯೪೮ರಲ್ಲೇ ಚಿಂತಿಸಿದ ಲಿಂಗೈಕ್ಯ ಪ್ರಭುರಾಜೇಂದ್ರ ಸ್ವಾಮೀಜಿಗಳು ಇಂತಹ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸದ್ಯ ೪ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದರೊಂದಿಗೆ ಜಿಲ್ಲೆಯಲ್ಲೇ ಸಂಗಮೇಶ್ವರ ವಿದ್ಯಾವರ್ಧಕ ಸಂಘ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ಶಿಕ್ಷಣ ಸಂಸ್ಥೆಗಳು ಪವಿತ್ರ ಜಾಗವಿದ್ದಂತೆ. ಬದುಕಿನಲ್ಲಿ ಅಪಾರ ನಿರೀಕ್ಷೆಯೊಂದಿಗೆ ಪಾಲಕರು ನಿಮ್ಮನ್ನು ಕಳುಹಿಸಿರುತ್ತಾರೆ. ಅವರ ಕನಸಿಗೆ ಚ್ಯುತಿ ಬರದಂತೆ ನಿಮ್ಮನ್ನು ನೀವು ಮೋಸ ಮಾಡಿಕೊಳ್ಳದೆ ಬದುಕನ್ನು ಪ್ರೀತಿಸುವಂತವರಾಗಿ ಮುಂದೆ ಸಾಗಿರಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಚೇರ್‌ಮನ್ ಐ.ಎಸ್.ಲಿಂಗದಾಳ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಎನ್.ವಂದಾಲ ಮಾತನಾಡಿದರು.
ಅತಿಥಿಗಳಾಗಿ ಸಂಘದ ನಿರ್ದೇಶಕರಾದ ಎ.ಕೆ.ತಾಳಿಕೋಟಿ, ಆರ್.ಕೆ.ಗೌಡರ, ಎಸ್.ಜಿ.ಕನ್ನೂರ, ಬಿ.ಕೆ.ಮಾಟೂರ, ಉಪನ್ಯಾಸಕರಾದ ಆರ್.ಐ.ಮುಜಾವರ, ಎಚ್.ಎಚ್.ವಡ್ಡರ, ಎಂ.ಎಸ್.ಕಾರಬಾರಿ, ಆಶಾ ಲಕ್ಕಂ, ಜಿ.ಎಂ.ಡೊಳ್ಳಿನ, ನಾಗರಾಜ ಬೇಲಾಳ, ಐ.ಎಸ್.ಹಿರೇಮಠ, ಜಿ.ಎಸ್.ರೇಶ್ಮಿ, ಎಸ್.ಎಚ್.ಸರ್ಕಾವಸ್, ಮುಖ್ಯಗುರು ಆರ್.ಜಿ.ಸನ್ನಿ ಇತರರು ಇದ್ದರು.