ಬಣ್ಣದ ಬಂಡಿ ಮೆರವಣಿಗೆ, ರೇನ್‌ಡ್ಯಾನ್ಸ್ ನಿಷೇಧ
ನಿಮ್ಮ ಸುದ್ದಿ ಬಾಗಲಕೋಟೆ
ನಗರದಲ್ಲಿ ಮಾರ್ಚ ೨೯ ರಿಂದ ೩೧ರ ವರೆಗೆ ಮೂರು ದಿನಗಳ ಕಾಲ ಜರುಗಲಿರುವ ಹೋಳಿ ಆಚರಣೆಯಲ್ಲಿ ಬಣ್ಣದ ಬಂಡಿ ಮೆರವಣಿಗೆ, ರೇನ್‌ಡ್ಯಾನ್ಸ್ ಹಾಗೂ ಸಾಮೂಹಿಕವಾಗಿ ಆಚರಣೆಗೆ ಆಯೋಜನೆೆ ಮಾಡುವದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಸಬಾಂಗಣದಲ್ಲಿ ಬುಧವಾರ ಜರುಗಿದ ಹೋಳಿ ಆಚರಣೆ ಕುರಿತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಹಾಗೂ ಐತಿಹಾಸಿಕವಾಗಿ ಹಲವು ವರ್ಷಗಳಿಂದ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದು, ಕಳೆದ ಒಂದು ವರ್ಷದಿಂದ ಕೋವಿಡ್ ಮಹಾಮಾರಿ ಸೋಂಕು ರೋಗದ ಹಾವಳಿಯಿಂದಾಗಿ ಜನರ ಆರೋಗ್ಯದ ದೃಷ್ಠಿಯಿಂದ ಈ ವರ್ಷ ಹೋಳಿ ಹಬ್ಬವನ್ನು ಸೀಮಿತವಾಗಿ ಆಚರಿಸುವ ಅವಶ್ಯಕತೆ ಇದೆ ಎಂದರು.
ಧಾರ್ಮಿಕವಾಗಿ ಕೈಗೊಳ್ಳುವ ಆಚರಣೆಗೆ ಸಂಬಂಧಿಸಿದಂತೆ ವಿಧಿ ವಿಧಾನಗಳನ್ನು ಪೂಜೆಗೆ ಸೀಮಿತಗೊಳಿಸಲಾಗಿದೆ. ತಮ್ಮ ಕುಟುಂಬ ಹಾಗೂ ಗೆಳೆಯರ ಜೊತೆ ಬಣ್ಣದ ಆಟವನ್ನು ಆಡಬಹುದಾಗಿದೆ. ಕೋವಿಡ್ ೨ನೇ ಅಲೇ ಹರಡಬಹುದಾದ ರೋಗದ ಗಂಭೀರತೆ ಅರಿತು ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು. ಜನರ ಆರೋಗ್ಯದ ದೃಷ್ಠಿಯಿಂದ ಜಿಲ್ಲಾಡಳಿತದಿಂದ ಹೊರಡಿಸಲಾದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಕೋವಿಡ್ ೨ನೇ ಅಲೇ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಠಿಯಿಂದ ಹೋಳಿ ಹಬ್ಬವನ್ನು ಸೀಮಿತ ಆಚರಣೆಗೆ ನಿರ್ಧರಿಸಲಾಗಿದ್ದು, ತಮ್ಮ ಪರಿವಾರದ ಜೊತೆ, ಗೆಳೆಯರ ಜೊತೆ ಹಾಗೂ ಓಣಿಗೆ ಸೀಮಿತವಾಗಿ ಹೊಳಿ ಆಚರಿಸಬೇಕು. ರೋಗ ಹರಡಲಿಕ್ಕೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಕೋವಿಡ್ ಹಿನ್ನಲೆಯಲ್ಲಿ ಮಾದರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಿ. ಹಬ್ಬದ ಆಚರಣೆಯಲ್ಲಿ ಅಜಾಗರುಕತೆ ಬೇಡ, ಸುರಕ್ಷತೆ ದೃಷ್ಠಿಯಿಂದ ಮಾಸ್ಕ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಸುವಂತೆ ತಿಳಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗAಗಪ್ಪ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ಆಚರಣೆ ಸಮಿತಿಯ ಮುಖಂಡರಾದ ಕಳಕಪ್ಪ ಬಾದೊಡಗಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ಶಾಂತತಾ ಸಮಿತಿಯ ಎ.ಎ.ದಾಂಡಿಯಾ, ಕುತುಬುದ್ದಿನ ಖಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.