ನಮ್ಮಲ್ಲಿಲ್ಲ ಕೊರೊನಾ:ನಾವೇಕೆ ನಿರ್ಬಂಧ ಹಾಕಿಕೊಳ್ಳೋಣ
ನಿಮ್ಮ ಸುದ್ದಿ ಬಾಗಲಕೋಟೆ
ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಏಪ್ರೀಲ್ ೨ ರಿಂದ ಟಫ್ ರೂಲ್ಸ್ ಜಾರಿಗೊಳಿಸಿದ್ದರೂ ರಾಜ್ಯದಲ್ಲೇ ಖ್ಯಾತಿ ಪಡೆದ ಅಮೀನಗಡದ ಜಾನುವಾರ ಸಂತೆಯಲ್ಲಿ ಮಾತ್ರ ಯಾವುದೇ ಟಫ್ ರೂಲ್ಸ್ ಕಂಡು ಬರಲಿಲ್ಲ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಜಾನುವಾರು ಸಂತೆಗೆ ಪಕ್ಕದ ರಾಜ್ಯಗಳಿಂದ ನೂರಾರು ಜನ ವ್ಯಾಪಾರಕ್ಕಾಗಿ ಬರುತ್ತಾರೆ. ಆದರೆ ಇಲ್ಲಿ ಯಾವುದೇ ಕೋವಿಡ್ ನಿಯಮ ಪಾಲನೆ ಆಗುವುದಿಲ್ಲ.
ಸ್ಥಳೀಯ ಆಡಳಿತ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದರೂ ೧೦೦ ರೂ. ಕೊಡುತ್ತೇವೆ ಹೊರತು ಮಾಸ್ಕ್ ಹಾಕಿಕೊಳ್ಳುವುದಿಲ್ಲ ಎಂಬ ಧೋರಣೆಯಲ್ಲಿ ವ್ಯಾಪಾರಸ್ಥರು ಇದ್ದಂತಿದೆ. ಇದು ಹೀಗೆ ಮುಂದುವರೆದರೆ ಪಟ್ಟಣಕ್ಕೆ ದೊಡ್ಡ ಆಪತ್ತು ಬಂದರೂ ಬರಬಹುದು ಎಂಬುದು ಪ್ರಜ್ಞಾವಂತ ನಾಗರಿಕರ ಮಾತಾಗಿದೆ.
ಕೆಎಸ್ಸರ‍್ಟಿಸಿ ಬಸ್‌ನಲ್ಲಿ ಸೀಟ್‌ಗಳಷ್ಟೆ ಪ್ರಯಾಣಿಕರು ಇರಬೇಕೆಂದಿದ್ದರೂ ಈವರೆಗೂ ಬಸ್‌ಗಳಲ್ಲಿ ಜನ ನಿಂತುಕೊಂಡೆ ಪ್ರಯಾಣಿಸುತ್ತಿರುತ್ತಾರೆ. ಅದರಲ್ಲೂ ಬಸ್‌ನ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರೂ ಸಹ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿದಂತಾಗಿದೆ.
ಗ್ರಾಮೀಣ ಪ್ರದೇಶದಿಂದ ಶಾಲೆ-ಕಾಲೇಜ್‌ಗೆ ಬರುವ ವಿದ್ಯಾರ್ಥಿಗಳು ಖಾಸಗಿ ವಾಹನದ ಮೊರೆ ಹೋಗಿದ್ದು ಕುರಿ ತುಂಬಿದಂತೆ ಮಕ್ಕಳನ್ನು ಕರೆ ತರುವ ದೃಶ್ಯ ಗ್ರಾಮೀಣ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.
ನಮ್ಮ ಜಿಲ್ಲೆಯಲ್ಲಿ ಕೊರೊನಾ ಪ್ರಕರಣದ ಕಡಿಮೆ ಇದೆ. ಹೀಗಾಗಿ ಇಲ್ಲಿ ಕೊರೊನಾ ಆತಂಕವಿಲ್ಲ ಎಂಬ ಬೇಜವಾಬ್ದಾರಿ ಮಾತು ಕೆಲವರಿಂದ ಕೇಳಿದ್ದು ಅಂಗಡಿ, ಮುಗ್ಗಂಟು ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಮಾಸ್ಕ್ ಧರಿಸುತ್ತಿಲ್ಲ.
ಬೀದಿಬದಿ ವ್ಯಾಪಾರಸ್ಥರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತದೆ ಎಂಬ ಮಾತು ವಾಟ್ಸ್ಆ್ಯಪ್ ಗ್ರುಪ್‌ನಲ್ಲಿ ಮಾತ್ರ ಹರಿದಾಡುತ್ತಿದ್ದು ಸ್ಥಳೀಯ ಆಡಳಿತ ಇಂತಹ ಬೇಜವಾಬ್ದಾರಿ ತೋರುವವರಿಗೆ ಸರಿಯಾಗಿ ಬಿಸಿ ಮುಟ್ಟಿಸುವ ಅನಿವಾರ್ಹತೆ ಬಂದೊದಗಿದೆ.