ಅದೇ ರಾಗ ಅದೇ ಹಾಡು
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಸರಿಯಾದ ಮುನ್ನೆಚ್ಚರಿಕೆ ಕೈಗೊಳ್ಳದ ಕಾರಣ ಸಂತೆ ಮಾರುಕಟ್ಟೆ ಮತ್ತೆ ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲೇ ನಡೆಯುತ್ತಿದೆ.
ಜಿಲ್ಲೆಯಲ್ಲಿ ಕೊರೊನಾದ ೨ನೇ ಅಲೆ ಅಬ್ಬರ ಹೆಚ್ಚಾಗುತ್ತಿದೆ. ಜನಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳಿ, ಮಾಸ್ಕ್ ಕಡ್ಡಾಯಗೊಳಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಸೂಚನೆ ನೀಡುತ್ತಿದ್ದರೂ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಕೋವಿಡ್ ಮತ್ತಷ್ಟು ವ್ಯಾಪಿಸಲು ಕಾರಣವಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಭಾನುವಾರ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಸಂತೆ ಮಾರುಕಟ್ಟೆ ರಾಜ್ಯ ಹೆದ್ದಾರಿ ಅಕ್ಕಪಕ್ಕ ನಡೆದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು. ಇವರ ಕಾರ್ಯ ಜನರ ಹಾಗೂ ವಾಹನ ಸವಾರರ ಮೆಚ್ಚುಗೆಗೂ ಪಾತ್ರವಾಗಿತ್ತು. ಇದು ಹೀಗೆ ಮುಂದುವರೆಯಲಿ ಎಂಬ ಆಶಯವನ್ನೂ ಸಹ ವ್ಯಕ್ತಪಡಿಸಿದ್ದರು.
ಆದರೆ ಇಲ್ಲಿನ ಆಡಳಿತ ಅದೇ ರಾಗ ಅದೇ ಹಾಡು ಎಂಬಂತೆ ಸೋಮವಾರದಿಂದ ಮತ್ತೆ ರಸ್ತೆ ಅಕ್ಕಪಕ್ಕವೇ ಸಣ್ಣಪುಟ್ಟ ಮಾರುಕಟ್ಟೆ ನಡೆಯುತ್ತಿತ್ತು. ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರಸ್ಥರು ಬರುತ್ತಾರೆ ಎಂದು ಮಾಹಿತಿ ಇದ್ದರೂ ಯಾವುದೇ ಗೋಜಿಗೆ ಹೋಗದ ಕಾರಣ ಮತ್ತೆ ವ್ಯಾಪಾರವೆಲ್ಲವೂ ರಸ್ತೆ ಪಕ್ಕದಲ್ಲೇ ನಡೆಯುವಂತಾಗಿದೆ.
ಮತ್ತೊಂದೆಡೆ ಸಾರಿಗೆ ಬಸ್ ಸಂಚಾರ ಬಂದ್‌ನಿಂದಾಗಿ ಖಾಸಗಿ ವಾಹನಗಳ ಓಡಾಟವೂ ಹೆಚ್ಚಾಗಿತ್ತು. ಶನಿವಾರ ಸುತ್ತಲಿನ ರೈತರು, ವ್ಯಾಪಾರಸ್ಥರು ಜಾನುವಾರು ಮಾರುಕಟ್ಟೆಗೆ ಆಗಮಿಸುವುದರಿಂದ ಮತ್ತಷ್ಟು ರಸ್ತೆ ಗಿಜುಗುಡುವಂತಾಯಿತು.
ನಿವಾಸಿಗಳಿಗೆ, ವ್ಯಾಪಾರಿಗಳಿಗೆ, ರೈತರಿಗೆ ತಿಳಿಹೇಳಬೇಕಾದ ಆಡಳಿತ ಕೈಚೆಲ್ಲಿ ಕುಳಿತಂತೆ ಕಂಡು ಬಂದಿತು. ಈ ಕುರಿತು ಅಲ್ಲಿಯೇ ಇದ್ದ ಸಿಬ್ಬಂದಿಯೊಬ್ಬರನ್ನು ಕೇಳಿದರೆ ಏನ್ ಮಾಡೋಣ ಸರ್ ೨ನೇ ಶನಿವಾರ ನಾಳೆ ಭಾನುವಾರ ಸಿಬ್ಬಂದಿ ಕೊರತೆ ಇದೆ ಎಂಬ ಸಬೂಬು ಹೇಳಿದರು.
ಇನ್ನು ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಸಿಬ್ಬಂದಿ ನೇಮಿಸಿ ಸೂಳೇಬಾವಿ ಕ್ರಾಸ್ ಮತ್ತು ಚಿತ್ತರಗಿ ಕ್ರಾಸ್ ಬಳಿ ಶೆಡ್ ನಿರ್ಮಿಸಿದ್ದಾರೆ. ಆದರೆ ಇದುವರೆಗೆ ಚಿತ್ತರಗಿ ಕ್ರಾಸ್ ಬಳಿ ದಂಡ ವಿಧಿಸುವ ಪ್ರಕ್ರಿಯೆಯೇ ನಡೆದಿಲ್ಲ ಎಂಬುದು ಪ್ರಜ್ಞಾವಂತ ನಾಗರಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.