ಶೋಷಿತ ಸಮುದಾಯದ ಆಶಾ ಕಿರಣ ಡಾ.ಬಿ.ಆರ್.ಅಂಬೇಡ್ಕರ್
ನಿಮ್ಮ ಸುದ್ದಿ ಬಾಗಲಕೋಟೆ
ಶಿಕ್ಷಣದಿಂದಲೇ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯವೆಂಬುದನ್ನು ಮನುಕುಲಕ್ಕೆ ಸಾರುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಲು ಹೊರಟವರು ಡಾ.ಬಿ.ಆರ್.ಅಂಬೇಡ್ಕರ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರವರ 130ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶೋಷಿತ ವರ್ಗಕ್ಕೆ ಅಂಬೇಡ್ಕರವರ ಕೊಡುಗೆ ಅನನ್ಯವಾಗಿದೆ. ಗಾಂಧೀ ಮತ್ತು ಅಂಬೇಡ್ಕರ ಮಾರ್ಗಗಳು ಬೇರೆ ಬೇರೆಯಾದರೂ ಅವರಿಬ್ಬರ ಗುರಿ ಮಾತ್ರ ಒಂದೇ ಆಗಿತ್ತು. ಬುದ್ದ, ಬಸವ ಧರ್ಮ ಸಂಸ್ಥಾಪನೆ ಮಾಡಿದರೆ, ಅಂಬೇಡ್ಕರ ಸಂವಿಧಾನ ರಚಿಸುವ ಮೂಲಕ ಸಮಾಜಕ್ಕೆ ಧರ್ಮ ಗ್ರಂಥವನ್ನು ನೀಡಿದ್ದಾರೆ ಎಂದರು.
ಅಂಬೇಡ್ಕರ ಹುಟ್ಟಿದ ದಿನವಾದ ಎಪ್ರೀಲ್ 14 ನ್ನು ವಿಶ್ವಸಂಸ್ಥೆ ಬುದ್ದಿವಂತರ ದಿನವನ್ನಾಗಿ ಆಚರಿಸುತ್ತಿದೆ. ಅಲ್ಲದೇ ಮೇ 13 ರಂದು ರಾಷ್ಟ್ರೀಯ ಸಾಮರಸ್ಯದ ದಿನ ಎಂದು ಘೋಷಿಸಿದನ್ನು ನೆನಪಿಸಿಕೊಳ್ಳುವ ಅಗತ್ಯವಿದೆ. 3 ಶತಮಾನದ ಹೆಚ್ಚು ಪ್ರಾಚೀನ ಕಾಲದ ಕೋಲಂಬಿಯಾ ವಿವಿಯಲ್ಲಿ 6 ಜನ ಉತ್ತಮ ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ ಮೊದಲಿನದವರಾಗಿದ್ದರು. ಅವರು ನಡೆದು ಬಂದ ಹಾದಿಯಲ್ಲಿ ಹಾಗೂ ಅವರ ಮಾರ್ಗದರ್ಶನ, ತತ್ವ ಸಿದ್ದಾಂತ ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ನಮ್ಮ ದೇಶಕ್ಕೆ ಸಂವಿಧಾನ ರಚಿಸುವ ಮೂಲಕ ಮಹತ್ವದ ಕೊಡುಗೆ ನೀಡಿದ್ದು, ಅವರ ಅಶೋತ್ತರಗಳನ್ನು ಇಡೇರಿಸುವತ್ತ ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ನೋವು, ಅಪಮಾನ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಬಂದಾಗ ಮಾತ್ರ ಮುಂದೆ ಬರಲು ಸಾಧ್ಯವಾಗುತ್ತದೆ. ನಮ್ಮ ಭಾವನೆಯಿಂದ ಹೊರಬರಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂಬೇಡ್ಕರ ನಡೆದು ಬಂದ ಹಾದಿ ಇದಾಗಿತ್ತು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಕಲಬುರ್ಗಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರು ಮಾತನಾಡಿ ಸಂವಿಧಾನದಲ್ಲಿ ಅನೇಕ ಅಪರೂಪದ ವಿಷಯಗಳು ಒಳಗೊಂಡಿದ್ದು, ಶಿಕ್ಷಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅದರಲ್ಲಿ ಶಿಕ್ಷಣವು ರಾಜ್ಯದ ಹಿಡಿತದಲ್ಲಿ ಇರಬೇಕೆಂಬುದು ಮತ್ತು ಉಚಿತ ಶಿಕ್ಷಣ, ಶಿಕ್ಷಣದ ಹಕ್ಕು ಹೀಗೆ ಉಪಯುಕ್ತವಾದ ವಿಷಯ ಒಳಗೊಂಡಿದೆ. ಅಂಬೇಡ್ಕರ ಒಬ್ಬ ಮಹಿಳಾ ಸಬಲೀಕರಣದ ರೂವಾರಿಗಳಾಗಿದ್ದರು. ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದರು ಎಂದರು.
ಪ್ರಕೃತಿಗೆ ಜಾತಿ ಬೇದವಿರುವದಿಲ್ಲ. ಗಾಂಧೀಜಿಯವರಂತೆ ಅಂಬೇಡ್ಕರವರು ಸಹ ಅಹಿಂಸಾವಾದಿಗಳಾಗಿದ್ದರು. ಸಂವಿಧಾನ ಸಮಗ್ರ ವಿಷಯಗಳ ನಿರ್ದೇಶನ ನೀಡುವ ಮಾರ್ಗಸೂಚಿಯಾಗಿದ್ದು, ಇದರ ರಚನೆಯಲ್ಲಿ ಅಂಬೇಡ್ಕರ ಅವರಿಗಿದ್ದ ಪ್ರಬುತ್ವತೆ ಎತ್ತಿ ತೋರಿಸುತ್ತದೆ. ಅಂಬೇಡ್ಕರ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿದ್ದು, ದೇಶ-ವಿದೇಶಗಳಲ್ಲಿಯೂ ಆಗು ಹೋಗುಗಳನ್ನು ಗಮನದಲ್ಲಿಟ್ಟುಕೊಂಡು ನಮಗೆ ಬೇಕಾಗುವಂತ ಸಂವಿಧಾನ ರಚಿಸಿದ್ದಾರೆ. ಅವರು ರಚಿಸಿದ ಸಂವಿಧಾನ ಹಿಂದಿನ, ಇಂದಿನ ಹಾಗೂ ಮುಂದಿನ ಜನಾಂಗಕ್ಕೆ ಮಾರ್ಗಸೂಚಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸ್ವಾಗತಿಸಿ ಕೊನೆಗೆ ಅಂಬೇಡ್ಕರ ಅವರ ಬಗ್ಗೆ ರಚಿಸಿದ ಹಾಡನ್ನು ಹಾಡುವುದರ ಜೊತೆಗೆ ಎಲ್ಲರನ್ನು ವಂದಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ಅರ್ಪಿಸಲಾಯಿತು.