ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ:ಡಿಸಿ ರಾಜೇಂದ್ರ
ನಿಮ್ಮ ಸುದ್ದಿ ಬಾಗಲಕೋಟೆ
ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೇ ೪ರ ವರೆಗೆ ಸರಕಾರ ಕಠಿಣ ಕ್ರಮದ ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯಲ್ಲಿ ಮಾರ್ಗಸೂಚಿಗಳ ಕಟ್ಟಿನಿಟ್ಟಿನ ಪಾಲನೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸರಕಾರ ಹೊರಡಿಸಿರುವ ಹೊಸ ಮಾರ್ಗಸೂಚಿ ಕುರಿತು ಬುಧವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಮೇ ೪ರ ವರೆಗೆ ರಾತ್ರಿ ೯ ರಿಂದ ಬೆಳಗ್ಗೆ ೬ರ ವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಶುಕ್ರವಾರ ರಾತ್ರಿ ೯ ರಿಂದ ಸೋಮವಾರ ಬೆಳಗ್ಗೆ ೬ರ ವರೆಗೆ ಪೂರ್ತಿಯಾಗಿ ಕರ್ಪ್ಯೂ ಹೇರಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿಸಿ ಸೂಚಿಸಿದರು.
ರಾತ್ರಿ ಕರ್ಪ್ಯೂ ಸಮಯದಲ್ಲಿ ತುರ್ತು ಸಂಚಾರ ಹೊರತುಪಡಿಸಿ ಉಳಿದ ಎಲ್ಲ ವಾಹನ ಸಂಚಾರ ಬಂದ್ ಮಾಡಲಾಗಿದೆ. ಶನಿವಾರ ಮತ್ತು ಭಾನುವಾರದಂದು ಪೂರ್ತಿ ಕರ್ಪ್ಯೂ ಇರಲಿದೆ. ಹಗಲು ವೇಳೆಯಲ್ಲಿ ಮಾತ್ರ ಮದುವೆ, ಉಳಿದ ಕಾರ್ಯಕ್ರಮ ಮಾಡಿಕೊಳ್ಳಬಹುದಾಗಿದೆ. ರಾತ್ರಿ ವೇಳೆಯಲ್ಲಿ ಯಾವುದೇ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತಿಲ್ಲ. ನ್ಯಾಯಬೆಲೆ ಅಂಗಡಿ, ಆಹಾರ, ಧವಸಧಾನ್ಯ, ಹಣ್ಣು, ತರಕಾರಿ, ಹಾಲು ಉತ್ಪನ್ನಗಳಿಗೆ ಅವಕಾಶವಿದ್ದು, ತೆರೆದ ಪ್ರದೇಶಗಳಲ್ಲಿ ಸಗಟು, ತರಕಾರಿ, ಹಣ್ಣು, ಹೂವು ಮಾರಾಟಕ್ಕೆ ಮಾತ್ರ ಅವಕಾಶವಿದೆ ಎಂದರು.
ಮದುವೆಗೆ ೫೦, ಅಂತ್ಯಕ್ರಿಯೆಗೆ ೨೦ ಜನರಿಗೆ ಅವಕಾಶ
ಸರಕಾರದ ಹೊಸ ಮಾರ್ಗಸೂಚಿಯನ್ವಯ ಮದುವೆಗೆ ೫೦ ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಂತ್ಯಕ್ರಿಯೆಗೆ ೨೦ ಜನರು ಮಾತ್ರ ಪಾಲ್ಗೊಳ್ಳಬಹುದಾಗಿದ್ದು, ಈ ಬಗ್ಗೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ನೋಡಲ್ ಅಧಿಕಾರಿಗಳು ಮಾರ್ಗಸೂಚಿ ನಿಯಮ ಪಾಲನೆಗೆ ಕ್ರಮಜರುಗಿಸಬೇಕು. ಪಾಲನೆಯಾಗದಿದ್ದಲ್ಲಿ ದಂಡದ ಜೊತೆ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಿನಿಮಾ, ಶಾಪಿಂಗ್ ಬಂದ್ | ಬಾರ್, ಹೋಟಲ್‌ನಿಂದ ಪಾರ್ಸಲ್
ಸಿನಿಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಯೋಗಾಕೇಂದ್ರ, ಈಜುಗೊಳ, ಸ್ಪೊರ್ಟ್ಸ್ ಕಾಂಪ್ಲೆಕ್ಸ್, ಬಾರ್, ಆಡಿಟೋರಿಯಂನಂತಹ ಸ್ಥಳಗಳನ್ನು ತೆರೆಯುವದನ್ನು ನಿಷೇಧಿಸಲಾಗಿದೆ. ಸ್ವಿಮ್ಮಿಂಗ್ ಫೆಡರೇಷನ್ ಆಪ್ ಇಂಡಿಯಾದಿAದ ಅನುಮತಿ ಪಡೆದ ಸ್ವಿಮ್ಮಿಂಗ್ ಫೂಲ್ ಮಾತ್ರ ತೆರೆಯಲು ಅವಕಾಶವಿದೆ. ಜಿಲ್ಲೆಯಲ್ಲಿರುವ ಹೋಟಲ್ ಮತ್ತು ರೆಸ್ಟೋರೆಂಟ್ ಹಾಗೂ ಬಾರ್, ಎಂಆರ್‌ಪಿಗಳಲ್ಲಿ ಪಾರ್ಸಲ್‌ಗೆ ಅವಕಾಶ ನೀಡಲಾಗಿದೆ. ಲಾಡ್ಜ್ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆ, ಸಮಾರಂಭ ನಿರ್ಬಂಧ
ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಭೆ ಸಮಾರಂಭ ನಿರ್ಬಂಧಿಸಲಾಗಿದೆ. ಜಿಲ್ಲೆಯಲ್ಲಿರುವ ಬಾದಾಮಿ ಬನಶಂಕರಿ, ತುಳಸಿಗೇರಿ ಆಂಜನೇಯ, ಮುಚಖಂಡಿ ವೀರಭದ್ರೇಶ್ವರ ಹಾಗೂ ಕೂಡಲಸಂಗಮ ಸಂಗಮೇಶ್ವರ ದೇವಸ್ಥಾನಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿ ಮುಚ್ಚಲು ಈಗಾಗಲೇ ಆದೇಶಿಸಲಾಗಿದ್ದು, ಪಾಲನೆಯಾಗುತ್ತಿರುವ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರರು ನಿಗಾ ವಹಿಸಬೇಕು ಎಂದರು.
ಶಾಲಾ, ಕಾಲೇಜ ಸಂಪೂರ್ಣ ಬಂದ್
ಜಿಲ್ಲೆಯಲ್ಲಿರುವ ಪ್ರತಿಯೊಂದು ಶಾಲಾ ಕಾಲೇಜುಗಳನ್ನು ಬಂದ ಮಾಡಲು ತಿಳಿಸಿದ್ದು, ಆನ್‌ಲೈನ್ ಕ್ಲಾಸ್‌ಗೆ ಅವಕಾಶವಿದೆ. ಈ ಬಗ್ಗೆ ಡಿಡಿಪಿಐ ಕ್ರಮವಹಿಸಬೇಕು. ಟ್ಯೂಶನ್‌ಗಳನ್ನು ಸಹ ಬಂದ್‌ಗೆ ಆಗಬೇಕು.. ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ನಡೆಸಲು ಅನುಮತಿ ನೀಡಲಾಗಿದೆ. ಜಿಲ್ಲೆ ಮತ್ತು ರಾಜ್ಯಗಳ ನಡುವೆ ಸಂಚಾರಕ್ಕೆ ಯಾವುದೇ ರೀತಿಯ ನಿರ್ಬಂಧವಿರುವದಿಲ್ಲ. ಸಾರ್ವಜನಿಕ ಸಂಚಾರಕ್ಕೆ ಸಾರಿಗೆ ವ್ಯವಸ್ಥೆ ಇರಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಎಸ್ಪಿ ಲೋಕೇಶ ಜಗಲಾಸರ ಮಾತನಾಡಿ, ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದ್ದು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಜನ ಸಂದಣಿಯಾಗದಂತೆ ತರಕಾರಿ ಮತ್ತು ಹಣ್ಣು ಮಾರಾಟ ಪ್ರತ್ಯೇಕವಾಗಿ ಮಾರಾಟವಾಗುವಂತೆ ನೋಡಿಕೊಳ್ಳಬೇಕು. ವಲಸಿಗರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ಕೇಂದ್ರ ಸ್ಥಾಪಿಸಿ ವಲಸಿಗರ ಮಾಹಿತಿ ಮತ್ತು ಪರೀಕ್ಷೆಗೆ ಒಳಪಡಿಸಬೇಕು ಎಂದರು.
ಜಿಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗAಗಪ್ಪ, ಸಿದ್ದು ಹುಳ್ಳೊಳ್ಳಿ, ಡಿಎಚ್‌ಒ ಡಾ.ಎ.ಎನ್.ದೇಸಾಯಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ಪೌರಾಯುಕ್ತ ಮುನಿಷಾಮಪ್ಪ ಹಾಗೂ ತಾಲೂಕು ತಹಸೀಲ್ದಾರರು ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗವಹಿಸಿದ್ದರು.