ನಿಮ್ಮ ಸುದ್ದಿ ಬಾಗಲಕೋಟೆ
ಮದುವೆ ಕಾರ್ಯ ವೀಕ್ಷಣೆಗೆ ಪ್ಲಾಯಿಂಗ್ ಸ್ಕ್ವಾಡ್ ನೇಮಕ : ಕಳಸದ
ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರದ ಪೂರ್ತಿ ದಿನ ಕಪ್ರ್ಯೂ ಇರುವ ದಿನಗಳಲ್ಲಿಯೇ ಹೆಚ್ಚಾಗಿ ಮದುವೆಗಳು ನಡೆಯುತ್ತಿದ್ದು, ಮಾರ್ಗಸೂಚಿ ಪಾಲನೆ ವೀಕ್ಷಣೆಗೆ ಜಿಲ್ಲೆಯಾದ್ಯಂತ ಪ್ಲಾಯಿಂಗ್ ಸ್ಕ್ವಾಯಿಡ್ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪೂರ್ತಿ ಕಪ್ರ್ಯೂ ಇರುವ ವಿಕೆಂಡ್ ದಿನಗಳಲ್ಲಿ ಹೆಚ್ಚಾಗಿ ಮದುವೆಗಳು ನಡೆಯುತ್ತಿವೆ. ಬಾಗಲಕೋಟೆ ಉಪವಿಭಾಗದಲ್ಲಿ 110 ಹಾಗೂ ಜಮಖಂಡಿ ಉಪವಿಭಾಗಗಳಲ್ಲಿ 65 ಮದುವೆಗಳಿಗೆ ಅನುಮತಿ ಪಡೆದಿದ್ದಾರೆ. ಅನುಮತಿ ಪಡೆದವರಿಗೆಲ್ಲ ತಲಾ ಒಂದು ಮುದವೆಗೆ 50 ಪಾಸ್‍ಗಳನ್ನು ನೀಡಲಾಗಿದೆ.
ಪಾಸ್ ಇದ್ದವರು ಮಾತ್ರ ಕಲ್ಯಾಣ ಮಂಟಪ ಹಾಗೂ ಮದುವೆ ಛತ್ರದಲ್ಲಿ ಇರಬೇಕು. ಹೆಚ್ಚಿಗೆ ಇದ್ದಲ್ಲಿ ಕಾನೂನಿನಡಿಯಲ್ಲಿ ಕ್ರಮಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮದುವೆ ಕಾರ್ಯಕ್ಕೆ ನೀಡಿದ ನಿರಾಕ್ಷೇಪಣಾ ಪತ್ರದಲ್ಲಿ ತಿಳಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ನಿಯಮ ಪಾಲನೆಯಾಗುತ್ತಿರುವ ಬಗ್ಗೆ ಪ್ಲಾಯಿಂಗ್ ಸ್ಕ್ವಾಡ್‍ನ ತಂಡ ವೀಕ್ಷಣೆ ಮಾಡಲಿದ್ದು, ಮದುವೆ ಕಾರ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಜನರು ಕ್ರಮಗಳನ್ನು ಅನುಸರಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಲು ತಿಳಿಸಿದರು.
ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾಸ್ಕ, ಸಾಮಾಜಿಕ ಅಂತರ, ಮಾಸ್ಕ ಧರಿಸದೇ ಓಡಾಡುವವರಿಗೆ ದಂಡ ಹಾಕಲು ಮುಂದಾಗಬೇಕು. ಕಪ್ರ್ಯೂ ಸಮಯದಲ್ಲಿ ಮಾರ್ಗಸೂಚಿಗಳು ಪಾಲನೆಯಾಗುವಂತೆ ಪೊಲೀಸ್ ಇಲಾಖೆ ಕ್ರಮಜರುಗಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಉಲ್ಲಂಘನೆಯಾದಲ್ಲಿ ಸೂಕ್ತ ಕ್ರಮಜರುಗಿಸಲು ಹಿಂಜರಿಯಬಾರದು. ಮುಂದಿನ ದಿನಗಳಲ್ಲಿ ಕೋವಿಡ್ 3ನೇ ಅಲೆಯು ಸಹ ಬರುವ ಸಾದ್ಯತೆ ಇದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಸರಕಾರ ಮಾರ್ಗಸೂಚಿ ಪಾಲನೆಗೆ ಅಧಿಕಾರಿಗಳ ಸಭೆ ಕರೆದು ಸಭೆ ನಡೆಸಲಾಗಿದ್ದು, ಪಾಲನೆಗೆ ಕ್ರಮಜರುಗಿಸಲಾಗುತ್ತಿದೆ. ಕಪ್ರ್ಯೂ ಸಮಯದಲ್ಲಿ ಜನ ಹೊರಗಡೆ ಬರದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮಜರುಗಿಸುತ್ತಿದ್ದಾರೆ.
ಪ್ರತಿದಿನ 5000 ಸ್ಯಾಂಪಲ್ ತೆಗೆಯಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವದಿಲ್ಲ. ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ತಾಲೂಕಾ ಆಸ್ಪತ್ರೆ ಹಾಗೂ ಸಿಸಿಸಿ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಸರಕಾರ ಹೊಸದಾಗಿ ಹೊರಡಿಸಿದ ಮಾರ್ಗಸೂಚಿಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಆಟೋಗಳಲ್ಲಿ ಧ್ವನಿವರ್ಧಕ ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಶನಿವಾರ ಮತ್ತು ಭಾನುವಾರು ಪೂರ್ತಿ ಕಪ್ರ್ಯೂ ಇರುವದರಿಂದ ಸೂಕ್ರ ಕ್ರಮಕೈಗೊಳ್ಳಲಾಗುತ್ತಿದೆ. ಕಪ್ರ್ಯೂ ಸಮಯದಲ್ಲಿ ಮದುವೆಗಳು ನಡೆಯುತ್ತಿದ್ದು, ಸ್ಥಳೀಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯಾಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಪ್ಲಾಯಿಂಗ್ ಸ್ಕ್ವಾಡ್ ತಂಡದ ಮೂಲಕ ಹೆಚ್ಚಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿ.ಪಂ ಸಿಇಓ ಟಿ.ಭೂಬಾಲನ್ ಮಾತನಾಡಿ ನರೇಗಾಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.