ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆ ಸೇರಿದಂತೆ ಕಮತಗಿ ಪಟ್ಟಣದಲ್ಲೂ ಕೊರೊನಾ ಪಾಸಿಟಿವ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ತಡೆಗೆ ಪಟ್ಟಣವನ್ನು ಒಂದು ವಾರ ಕಾಲ ಸಂಪೂರ್ಣ ಬಂದ್ ಮಾಡಲು ಕಮತಗಿ ನಾಗರಿಕರು ನಿರ್ಧರಿಸಿದ್ದಾರೆ.
ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಎಲ್ಲ ವ್ಯಾಪಾರಸ್ಥರ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ ತಿಳಿಸಿದರು.
೨ನೇ ಅಲೆ ತನ್ನ ವ್ಯಾಪಕತೆ ಪಡೆಯುತ್ತಿರುವುದರಿಂದ ಅದರ ಚೈನ್ ಕಟ್ ಮಾಡಲು ಸಂಪೂರ್ಣ ಲಾಕ್‌ಡೌನ್ ಒಂದೆ ಸೂಕ್ತ ಪರಿಹಾರ ಎನ್ನಲಾಗಿದ್ದು ಎಲ್ಲರ ಒಪ್ಪಿಗೆ ಮೇರೆಗೆ ಮೇ ೮ ರಿಂದ ೧೫ರ ವರೆಗೆ ಒಂದು ವಾರ ಕಾಲ ಸಂಪೂರ್ಣ ಲಾಕ್‌ಡೌನ್ ಇರಲಿದೆ. ಮೆಡಿಕಲ್ ಶಾಪ್ ಹಾಗೂ ಆಸ್ಪತ್ರೆ ಹೊರತು ಪಡಿಸಿ ಯಾವುದೇ ವ್ಯವಹಾರ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರ ಎಷ್ಟೆ ನಿಯಮ ರೂಪಿಸಿದರೂ ಪಾಲಿಸಬೇಕಾದವರು ನಾವೆಲ್ಲ, ಆದರೆ ಮೈಮರೆತರೆ ಕೊರೊನಾ ಸೋಂಕು ಎಲ್ಲೆಡೆ ಒಕ್ಕರಿಸುತ್ತದೆ. ಇದಕ್ಕಾಗಿ ವ್ಯಾಪಾರಸ್ಥರೆಲ್ಲ ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಜನತೆ ಕೊರೊನಾದೊಂದಿಗೆ ನಿರಂತರ ಹೋರಾಟದ ಅನಿವಾರ್ಯತೆ ಇದೆ. ಮನೆಯಲ್ಲೇ ಇರಿ. ಅವಶ್ಯಕತೆಯಿದ್ದಾಗ ಮಾಸ್ಕ್ ಧರಿಸಿ. ವಿನಾಕಾರಣ ಹೊರಗೆ ಸಂಚರಿಸದೆ ಆಡಳಿತ ನಿರ್ಧಾರಕ್ಕೆ ಬೆಂಬಲ ನೀಡಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.