ನಿಮ್ಮ ಸುದ್ದಿ ಬಾಗಲಕೋಟೆ
ಇಳಕಲ್ ತಾಲೂಕಿನ ವಾಣಿಜ್ಯ ನಗರಿ ಎಂದೆ ಖ್ಯಾತಿ ಪಡೆದ ಗುಡೂರ ಗ್ರಾಮದಲ್ಲಿ ಮೇ ೨೪ರಂದು ನಡೆಯಬೇಕಿದ್ದ ಹುಲ್ಲೇಶ್ವರ ದೇವಸ್ಥಾನದ ಜಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದು ಉಪತಹಸೀಲ್ದಾರ್ ಎಸ್.ವಿ.ಕುಂದರಗಿ ತಿಳಿಸಿದರು.
ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಹುಲ್ಲೇಶ್ವರ ದೇವಸ್ಥಾನದಲ್ಲಿ ಸೇರಿದ್ದ ಗ್ರಾಮಸ್ಥರ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕೊರೊನಾ ವ್ಯಾಪಿಸುತ್ತಿರುವದರಿಂದ ಜಿಲ್ಲೆಯಲ್ಲಿ ಜಾತ್ರೆ, ಸಭೆ, ಸಮಾರಂಭ ಹಾಗೂ ಮೆರವಣಿಗೆಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಹೀಗಾಗಿ ಗುಡೂರ ಗ್ರಾಮದಲ್ಲೂ ಮೇ ೨೪ರಂದು ನಡೆಯುವ ಹುಲ್ಲೇಶ್ವರ ಜಾತ್ರೆ ರದ್ದುಗೊಂಡಿದ್ದು ಗ್ರಾಮಸ್ಥರು ಸಹಕರಿಸಬೇಕು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಜಾತ್ರೆ ರದ್ದುಗೊಳಿಸಲಾಗಿದ್ದು, ಭಕ್ತರು ಅನವಶ್ಯಕವಾಗಿ ದೇವಸ್ಥಾನಕ್ಕೆ ಆಗಮಿಸಬಾರದು. ನಿಯಮ ಉಲ್ಲಂಘಿಸಿ ಜನ ಗುಂಪಾಗಿ ಸೇರುವುದು, ಅಂಗಡಿ ಮುಂಗಟ್ಟು ತೆರೆಯುವುದು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಲೆಕ್ಕಿಗರಾದ ವಿಜಯ ರೋಣದ, ಸಿ.ಎಸ್.ಕೊಣ್ಣೂರ, ಮಲ್ಲಣ್ಣ ಹೂಲಗೇರಿ, ನಾಗರಾಜ ಕಂಚೇರ, ತೊಟ್ಲಪ್ಪ ತೊಟ್ಲಪ್ಪನವರ, ಚಂದಪ್ಪ ಪೂಜಾರಿ, ವಿರೇಶ ಮಂತ್ರಿ, ಅರ್ಚಕರು, ಗ್ರಾಮದ ಹಿರಿಯರು ಇದ್ದರು.