ಕೋವಿಡ್ ಪ್ರಕರಣಗಳಲ್ಲಿ ಇಳಿಮುಖ : ಸಚಿವ ಉಮೇಶ ಕತ್ತಿ
ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಹೊಸದಾಗಿ ದೃಡಪಟ್ಟ ಪಾಜಿಟಿವ್ ಪ್ರಕರಣಗಳನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ವಿಡಿ ಮೂಲಕ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ 2ನೇ ಅಲೆಯಿಂದ ಜಿಲ್ಲೆಯಲ್ಲಿ 7 ಸಾವಿರದವರೆಗೆ ಸೋಂಕು ದೃಡಪಟ್ಟಿದ್ದು, ಸದ್ದಯ ಸೋಂಕಿನ ಪ್ರಮಾಣ 2225ಕ್ಕೆ ಇಳಿಮುಖವಾಗಿದೆ.
ಕಳೆದ ಎರಡು ದಿನಗಳಲ್ಲಿ ಜಿಲ್ಲೆಯ ಸೋಂಕಿನ ಪ್ರಮಾಣ 8.19 ಇರುವುದು ಕಂಡುಬಂದಿದ್ದು, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದ್ದು, ಇನ್ನು ಒಂದು ವಾರದಲ್ಲಿ ಕೋವಿಡ್ ಮುಕ್ತ ಜಿಲ್ಲೆಗೆ ಎಲ್ಲ ರೀತಿಯ ಕ್ರಮವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ಗೆ ಸಂಬಂಧಿಸಿದ ಒಟ್ಟು 59 ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ 4 ಜನ ಮಾತ್ರ ಮೃತಪಟ್ಟಿರುತ್ತಾರೆ. 29 ಜನ ಬಾಗಲಕೋಟೆ ಜಿಲ್ಲೆಯಲ್ಲಿ ಉಳಿದ ರೋಗಿಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬ್ಲ್ಯಾಕ್ ಫಂಗಸ್ ಚಿಕತ್ಸೆಗೆ ಬೇಕಾದ ಔಷಧಿಗಳು ಪೂರೈಕೆಯಾಗುತ್ತಿದೆ. 11 ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಾಗಿದೆ. ಜಿಲ್ಲಾ ಆಸ್ಪತ್ರೆ ಮತ್ತು ಕುಮಾರೇಶ್ವರ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ಕ್ರಮಕೈಗೊಳ್ಳಬೇಕು. ಚಿಕಿತ್ಸೆಗೆ ಸರ್ಜನ್ ತಮ್ಮಲ್ಲಿ ಲಭ್ಯವಿಲ್ಲದಿದ್ದರೆ ಬೇರೆ ಆಸ್ಪತ್ರೆಯಿಂದ ಕರೆಯಿಸಿಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗೆ ಕಳುಹಿಸದಂತೆ ಕ್ರಮವಹಿಸಲು ಸೂಚಿಸಿದರು.
ಗಣಿ ಮತ್ತು ಭೂವಿಜ್ಞಾನ ಸಚಿವರಾದ ಮುರಗೇಶ ನಿರಾಣಿ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಸಿದರೆ ಬೀಳಗಿ ತಾಲೂಕಿನಲ್ಲಿ ಮಾತ್ರ ಕೋವಿಡ್ ಕೇಸ್ಗಳ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಕೋವಿಡ್ ನಿಯಂತ್ರಣಕ್ಕೆ ನಿರಾಣಿ ಫೌಂಢೇಶನ್ದಿಂದ ಸೈನಿಟರ್, ಸೋಂಕು ನಿಯಂತ್ರಣ ದ್ರಾವಣವನ್ನು ಉಚಿತವಾಗಿ ನೀಡಲಾಗಿದೆ.
ಅಲ್ಲದೇ ಸಿಸಿಸಿ ಕೇಂದ್ರಗಳಲ್ಲಿ ಉಚಿವಾಗಿ ಮೆನು ಪ್ರಕಾರ ಗುಣಮಟ್ಟದ ಊಟ, ಯೋಗ ಮತ್ತು ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ರೋಗಿಗಳನ್ನು ಬೇಗನೆ ಗುಣಪಡಿಸಲು ಸಾದ್ಯವಾಯಿತು. ಸದ್ಯದಲ್ಲಿಯೇ ಕೋವಿಡ್ ಮುಕ್ತ ತಾಲೂಕಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿ ಮಾತನಾಡಿ ಕೋವಿಡ್ ಲಸಿಕೆ ಪಡೆಯಲು ಬಂದವರಿಗೆ ಸ್ಯಾಂಪಲ್ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಲಸಿಕೆ ಪಡೆಯಲು ಜನ ಹಿಂಜರಿಯುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು. ಲಸಿಕೆ ಸರಬರಾಜು ಪ್ರಮಾಣದ ಮಾಹಿತಿ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಹೊಸದಾಗಿ ದೃಡಪಟ್ಟ ಸೋಂಕಿತರನ್ನು ಕಡ್ಡಾಯವಾಗಿ ಸಿಸಿಸಿ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು. ಲಸಿಕೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಹೆಲ್ತ ವರ್ಕರ್ಸ್ ಮತ್ತು ಫ್ರಂಟ್ಲೈನ್ ವಾರಿಯರ್ಸ್ಗಳಿಗೆ ಲಸಿಕೆ ನೀಡುವುದು ಪೂರ್ಣಗೊಂಡಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಲಸಿಕೆ ನೀಡಬೇಕು. ಮುಂಬರುವ ದಿನಗಳಲ್ಲಿ 3ನೇ ಅಲೆ ಆರಂಭವಾಗಲಿದ್ದು, ಲಸಿಕಾಕರಣ ಪೂರ್ಣಗೊಳಿಸಿದಲ್ಲಿ ಜನರಿಗೆ ಕೊರೊನಾದಿಂದ ಪ್ರಟೆಸ್ಟ್ ಮಾಡಿದಂತಾಗುತ್ತದೆ. ಇದಕ್ಕಾಗಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸದ್ಯ ಜಿಲ್ಲೆಯಲ್ಲಿರುವ ಕೋವಿಡ್ ಮಾಹಿತಿಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಲಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ಸೇರಿದಂತೆ ಕೋವಿಡ್ ನೋಡಲ್ ಅಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.
ಬಾಕ್ಸ್ . . .
*ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಿ*
—————————–
ಕೋವಿಡ್ 3ನೇ ಅಲೆ ಬೇಗನೆ ಬರುವ ಸಾಧ್ಯತೆ ಇದ್ದು, ಈ ಅಲೆಯಲ್ಲಿ 0 ರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದ್ದರಿಂದ ಮಕ್ಕಳ ಚಿಕಿತ್ಸೆಗೆ ಬೇಕಾಗ ಅಗತ್ಯ ಔಷಧಿ, ವೈದ್ಯಕೀಯ ಉಪಕರಣಗಳನ್ನು ಖರೀದಿಸಬೇಕು. ಮಕ್ಕಳ ಚಿಕಿತ್ಸೆಗೆ ಬೇಕಾದ ಔಷಧಿ, ಉಪಕರಣಗಳ ಬಗ್ಗೆ ಈಗಲೇ ಮಾಹಿತಿ ನೀಡಬೇಕು. ಹೊಸ ಉಪಕರಣಗಳ ಖರೀದಿಗೆ ಕ್ರಮವಹಿಸಲಾಗುತ್ತಿದೆ. ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ವೈದ್ಯರುಗಳಿಗೆ ಅನುಭವ ಹೆಚ್ಚಾಗಿ ಆಗಿದ್ದು, 3ನೇ ಅಲೆಯ ಬಗ್ಗೆ ನಿಷ್ಕಾಳಜಿ ವಹಿಸದೇ ಈಗಲೇ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯವರು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.
– *ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವರು*