ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಂದ ಉಂಟಾಗಬಹುದಾದ ಪ್ರವಾಹವನ್ನು ನಿಯಂತ್ರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜರುಗಿದ ಮುಖ್ಯಮಂತ್ರಿಗಳ ವಿಡಿಯೋ ವಚ್ರ್ಯೂವಲ್ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ ಮೂರು ನದಿಗಳಿಂದ ಪ್ರವಾಹ ಉಂಟಾಗುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ 188 ಗ್ರಾಮಗಳು ಬಾಧಿತಗೊಳಗಾಗುತ್ತಿವೆ.
ಕೃಷ್ಣಾ ನದಿಯಿಂದ 69, ಮಲಪ್ರಭಾ ನದಿಯಿಂದ 63 ಹಾಗೂ ಘಟಪ್ರಭಾ ನದಿಯಿಂದ 56 ಗ್ರಾಮಗಳು ಬಾಧಿತಗೊಳಗಾಗುತ್ತಿವೆ. ವಿವಿಧ ಜಲಾಶಯಗಳ ಒಳ ಹಾಗೂ ಹೊರಹರಿವಿನ ಪ್ರಮಾಣದ ಮಾಹಿತಿಯನ್ನು ಪ್ರತಿದಿನ ಪಡೆಯಲಾಗುತ್ತಿದೆ. ಪ್ರವಾಹ ಉಂಟಾದಲ್ಲಿ ನಿಯಂತ್ರಣಕ್ಕೆ ಎಲ್ಲ ರೀತಿಯಿಇಂದ ಸಜ್ಜಾಗಿರುವುದಾಗಿ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಹಿಡಕಲ್ ಜಲಾಶಯದ ಒಳ ಹರಿರುವ 33732 ಕ್ಯೂಸೆಕ್ಸ್ ಇದ್ದರೆ, ಹೊರ ಹರಿವು 88 ಕ್ಯೂಸೆಕ್ಸ್ ಇದೆ. ಹಿಪ್ಪರಗಿ ಜಲಾಶಯ ಒಳ ಹರಿವು 72000, ಹೊರ ಹರಿವು 71000 ಕ್ಯೂಸೆಕ್ಸ್, ನವಿಲುತೀರ್ಥ ಜಲಾಶಯ ಒಳಹರಿವು 238, ಹೊರ ಹರಿವು 116 ಕ್ಯೂಸೆಕ್ಸ್ ಇರುವುದಾಗಿ ತಿಳಿಸಿದರು.
ಮುಂಗಾರು ಸಿದ್ದತೆ ಹಾಗೂ ಪ್ರವಾಹ ಮುಂಜಾಗ್ರತಾ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ತಹಶೀಲ್ದಾರರೊಂದಿಗೆ ಸಭೆ ನಡೆಸಿರುವುದಾಗಿ ತಿಳಿಸಿದರು.
ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಪ್ರತಿ ತಾಲೂಕು ಹಾಗೂ ಉಪವಿಭಾಗ ಮಟ್ಟದಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿನ 24 ಗಂಟೆಗಳ ತುರ್ತು ಸಹಾಯವಾಣಿ ಪ್ರಾರಂಭಿಸಲಾಗಿದೆ. ಪ್ರವಾಹಕ್ಕೆ ಬಾಧಿಗೊಳ್ಳಬಹುದಾದ ಗ್ರಾಮಗಳ ಜನರನ್ನು ಸ್ಥಳಾಂತರಿಸಿ ಉಪಚರಿಸಲು ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿದೆ. ಪ್ರವಾಹ, ಅತಿವೃಷ್ಠಿಯಲ್ಲಿ ಬರಬಹುದಾದ ಸಾಂಕ್ರಾಮಿಕ ರೋಗಳಿಗೆ ಸಂಬಂಧಿಸಿದ ಔಷಧ ಮತ್ತು ಆ್ಯಂಟಿ ಸ್ನೇಕ್ ವಿನೋಮ್ ದಾಸ್ತಾನಿಗೆ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.
ನುರಿತ ಈಜುಗಾರರು, ಹಾವು ಹಿಡಿಯುವವರು ಹಾಗೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ. ಜಮಖಂಡಿ ತಾಲೂಕಿನ ಉತ್ತೂರ ಗ್ರಾಮದಲ್ಲಿ ಜೂನ್ 19 ಹಾಗೂ ಬಾದಾಮಿ ತಾಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ಜೂನ್ 25 ರಂದು ಜಂಟಿ ಮಾಕ್ ಎಕ್ಸಸೈಜ್ ಮಾಡಲು ಕ್ರಮವಹಿಸುವಂತೆ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಾನುವಾರುಗಳಿಗೆ ಬೇಕಾಗುವ ಒಣ ಮೇವು ಮತ್ತು ಹಸಿ ಮೇವು ಸೇರಿ 679126 ಟನ್ ಲಭ್ಯವಿರುತ್ತದೆ. ಅಗತ್ಯ ವಸ್ತುಗಳಾದ ಆಹಾರಧಾನ್ಯ, ಸಕ್ಕರೆ, ಉಪ್ಪು, ಹಾಲಿನ ಪೌಡರಗಳನ್ನು ಸಂಗ್ರಹಿಸಿ ಇಡಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿ ತಾಲೂಕಿನಲ್ಲಿ ಬಾಧಿತಗೊಂಡ ಗ್ರಾಮಗಳ ಸ್ಥಳಾಂತರ ಕುಟುಂಬಗಳಿಗೆ ಕಲ್ಪಿಸಿದ ಕಾಳಜಿ ಕೇಂದ್ರಗಳಲ್ಲಿ ಊಟದ ಗುಣಮಟ್ಟ, ಮೂಲಭೂತ ಸೌಕರ್ಯ, ಔಷಧಿ ಮತ್ತು ಕೋವಿಡ್ ನಿಯಂತ್ರಣ ನಿಯಮ ಪಾಲನೆಗೆ ಜವಾಬ್ದಾರಿ ವಹಿಸಲಾಗಿದೆ.
ಬಾಣಂತಿಯರು ಹಾಗೂ ಗರ್ಭಿಣಿ ಮಹಿಳೆಯರಿಗೆ ಅವಶ್ಯವಿರುವ ಪೌಷ್ಟಿಕ, ರೋಗ ನಿರೋಧಕ ಔಷಧಿ ಪೂರೈಸಲು ಹಾಗೂ ಮುಂಚಿತವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.