ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರಿಗೆ ನೀಡಬೇಕಾದ 2020-21ನೇ ಹಂಗಾಮಿನ ಕಬ್ಬಿನ ಬಾಕಿ ಹಣ ಪಾವತಿಗೆ ಜುಲೈ 15 ರೊಳಗಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾರ್ಖಾನೆಯವರು 2020-21ನೇ ಸಾಲಿನ ಎಫ್.ಆರ್.ಪಿ ಹಾಗೂ 2019-20, 2018-19 ರಲ್ಲಿ ಘೋಷಿಸಿದ ಎಪ್.ಆರ್.ಪಿ ಕ್ಕಿಂತ ಹೆಚ್ಚುವರಿ ಹಣ ನೀಡದ ಕುರಿತು ಜಿಲ್ಲಾಡಳಿತಕ್ಕೆ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಎಫ್.ಆರ್.ಪಿ ಬಾಕಿ ಮೊತ್ತವನ್ನು ಜುಲೈ 15 ರೊಳಗಾಗಿ ಹಾಗೂ ಹಿಂದಿನ ವರ್ಗಗಳ ಎಫ್.ಆರ್.ಪಿಗಿಂತ ಹೆಚ್ಚುವರಿ ಘೋಷಿದ ಬಾಕಿ ಹಣವನ್ನು ಸೆಪ್ಟೆಂಬರ 15 ರೊಳಗಾಗಿ ಪಾವತಿಗೆ ಕ್ರಮವಹಿಸಲಾಗುವುದೆಂದು ಸಭೆಯಲ್ಲಿ ಇದ್ದ ಎಲ್ಲಾ ಕಾರ್ಖಾನೆಯವರು ತಿಳಿಸಿರುತ್ತಾರೆ ಎಂದರು.
2020-21ನೇ ಹಂಗಾಮಿಗೆ ಜಿಲ್ಲೆಯಲ್ಲಿರುವ 11 ಸಕ್ಕರೆ ಕಾರ್ಖಾನೆಗಳ ಪೈಕಿ 2 (ಗೋದಾವರಿ ಹಾಗೂ ಇಐಡಿ ಪ್ಯಾರಿ) ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಎಫ್.ಆರ್.ಪಿ ದರದ ಪ್ರಕಾರ ಸಂಪೂರ್ಣ ಪಾವತಿ ಮಾಡಿರುತ್ತಾರೆ. ಉಳಿದ 9 ಸಕ್ಕರೆ ಕಾರ್ಖಾನೆಯವರು 85.82 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿರುತ್ತಾರೆ.
ಅದೇ ರೀತಿ 2018-19 ನೇ ಸಾಲಿಗೆ ಘೋಷಿಸಿದ ಹೆಚ್ಚುವರಿ ಬಾಕಿ ಹಣ 72.55 ಕೋಟಿ ರೂ. ಹಾಗೂ 2019-20ನೇ ಸಾಲಿಗೆ 32.11 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿರುತ್ತವೆ ಎಂದು ತಿಳಿಸಿದರು.
ಪ್ರಸಕ್ತ 2020-21ನೇ ಸಾಲಿಗೆ ಬೀಳಗಿ ಶುಗರ್ಸ್ 2128.32 ಲಕ್ಷ ರೂ., ಜೇಮ್ಸ್ ಶುಗರ್ಸ್ 193 ಲಕ್ಷ ರೂ., ಇಂಡಿಯನ್ ಕೇನ್ ಪಾವರ್ ಲಿ. 1554 ಲಕ್ಷ ರೂ., ಜಮಖಂಡಿ ಶುಗರ್ಸ್ 316.89 ಲಕ್ಷ ರೂ., ನಿರಾಣಿ ಶುಗರ್ಸ್ 1889.78 ಲಕ್ಷ ರೂ., ಪ್ರಭುಲಿಂಗೇಶ್ವರ ಶುಗರ್ಸ್ 675 ಲಕ್ಷ ರೂ., ಸಾಯಿಪ್ರಿಯಾ ಶುಗರ್ಸ್ 1825.42 ಲಕ್ಷ ರೂ.ಗಳ ಬಾಕಿ ಉಳಿಸಿಕೊಂಡಿರುತ್ತವೆ.
ಅದೇ ರೀತಿ 2019-20ನೇ ಸಾಲಿನ ಘೋಷಿಸಿದ ಹೆಚ್ಚುವರಿ ಬಾಕಿ ಹಣ ಬೀಳಗಿ ಶುಗರ್ಸ್ 1769.11 ಲಕ್ಷ ರೂ., ಜೇಮ್ಸ್ ಶುಗರ್ಸ್ 697.23 ಲಕ್ಷ ರೂ., ನಿರಾಣಿ ಶುಗರ್ಸ್ 212.36 ಲಕ್ಷ ರೂ., ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 532.67 ಲಕ್ಷ ರೂ., ಉಳಿಸಿಕೊಂಡಿವೆ.
2018-19ನೇ ಸಾಲಿಗೆ ಹೆಚ್ಚುವರಿ ಘೋಷಿಸಿದ ಬಾಕಿ ಹಣವನ್ನು ಜೆಮ್ ಶುಗರ್ಸ್ 1116.96 ಲಕ್ಷ ರೂ., ಗೋದಾವರಿ ಶುಗರ್ಸ್ 517.18 ಲಕ್ಷ ರೂ., ಇಂಡಿಯನ್ ಕೇನ್ ಪವರ್ 1388.41 ಲಕ್ಷ ರೂ., ನಿರಾಣಿ ಶುಗರ್ಸ್ 2775.54 ಲಕ್ಷ ರೂ., ಪ್ರಭುಲಿಂಗೇಶ್ವರ ಶುಗರ್ಸ್ 695 ಲಕ್ಷ ರೂ., ಸಾಯಿಪ್ರಿಯಾ ಶುಗರ್ಸ್ 762.47 ಲಕ್ಷ ರೂ., ಬಾಕಿ ಉಳಿಸಿಕೊಂಡಿರುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಕಾನೂನು ಹಿತದೃಷ್ಠಿಯಿಂದ ರೈತರಿಗೆ ನೀಡಬೇಕಾದ ಬಾಕಿ ಹಣ ಪಾವತಿಸಿ, ಕಾರ್ಖಾನೆ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಮಹಾದೇವ ಮರಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಸೇರಿದಂತೆ ವಿವಿಧ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.