ಎಸ್‍ಓಪಿ ಪ್ರಕಾರ ಪರೀಕ್ಷಾ ಸಿದ್ದತೆಗೆ ಕ್ರಮ : ಡಿಸಿ ರಾಜೇಂದ್ರ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಾದ್ಯಂತ ಜುಲೈ 19 ಮತ್ತು 22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿರುವ ಎಸ್‍ಓಪಿ ಅನ್ವಯ ಪರೀಕ್ಷಾ ಸಿದ್ದತೆಗೆ ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಪರೀಕ್ಷಾ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೋವಿಡ್ ಹಿನ್ನಲೆಯಲ್ಲಿ ಎಸ್‍ಓಪಿ ಪ್ರಕಾರ ಪರೀಕ್ಷಾ ಕೊಠಡಿಯಲ್ಲಿ ಪ್ರತಿ ಡೆಸ್ಕ್‍ಗೆ ಒಬ್ಬರಂತೆ ಒಟ್ಟು 12 ವಿದ್ಯಾರ್ಥಿಳು ಇರಬೇಕು.
ಜಿಲ್ಲೆಯಲ್ಲಿ ಒಟ್ಟು 32805 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 173 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 5355 ಸಿಬ್ಬಂದಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ನಕಲು ಮುಕ್ತವಾಗಿ ಪರೀಕ್ಷೆ ನಡೆಸಲು ಸೂಚಿಸಿದರು.
ಪರೀಕ್ಷಾ ಕಾರ್ಯದಲ್ಲಿ ತೊಡಗಿದ ಎಲ್ಲ ಸಿಬ್ಬಂದಿಗಳಿಗೂ ಕೋವಿಡ್ ಲಸಿಕೆ ನೀಡಲಾಗಿದೆ. ಪರೀಕ್ಷಾ ಪೂರ್ವ ಮತ್ತು ಪರೀಕ್ಷೆಯ ನಂತರ ಸೋಂಕು ನಿವಾರಕ ದ್ರಾವಣದಿಂದ ಕೊಠಡಿ, ಪೀಠೋಪಕರಣ ಮತ್ತು ಶೌಚಾಲಯಗಳನ್ನು ಸ್ಯಾನಿಟೈಜರ್ ಮಾಡಲು ಗ್ರಾಮೀಣ ಭಾಗದಲ್ಲಿ ಗ್ರಾ.ಪಂ ಪಿಡಿಓ ಹಾಗೂ ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಹಾಗೂ ಕೊಠಡಿ ಪ್ರವೇಶಿಸುವ ಸಮಯದಲ್ಲಿ ಅಂತರ ಪಾಲನೆ ಮಾಡುವದರ ಜೊತೆಗೆ ವಿದ್ಯಾರ್ಥಿಗಳ ಕೈಗಳಿಗೆ ಸ್ಯಾನಿಟೈಜರ್ ಮಾಡಲು ತಿಳಿಸಿದರು.
ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಪ್ರಾರಂಭದ ಪೂರ್ವದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಅವರಿಗೆ ತಿಳಿಸಿದರು. ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನ ಪರೀಕ್ಷಾ ದಿನಗಳಂದು ಮೀಸಲಿಡಲು ಜಿಲ್ಲಾಧಿಕಾರಿಗಳು ತಿಳಿಸಿದರು. ಪರೀಕ್ಷೆ ಕೇಂದ್ರಕ್ಕೆ ಪೊಲೀಸ್ ಸಿಬ್ಬಂದಿ ನೇಮಿಸಲು ತಿಳಿಸಿದರು.
ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವದನ್ನು ನಿಷೇಧಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಡೆಸ್ಕ್‍ಗಳ ಕೊರತೆ ಇದ್ದಲ್ಲಿ ಹತ್ತಿರದ ಶಾಲೆಯಿಂದ ಪಡೆಯತಕ್ಕದ್ದು. ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಕೈತೊಳೆಯಲು ಸಾಬೂನು ಇಲ್ಲವೇ ಹ್ಯಾಂಡ್‍ವಾಷ್ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳು ತಮ್ಮದೇ ಆದ ನೀರಿನ ಬಾಟಲ್ ತರಲು ಇಚ್ಚಿಸಿದಲ್ಲಿ ಅವಕಾಶ ಕಲ್ಪಿಸಬೇಕು.
ಪರೀಕ್ಷಾ ಕೊಠಡಿಗೆ ಕ್ಯಾಲ್ಕುಲೇಟರ್, ಮೊಬೈಲ್, ಸ್ಮಾರ್ಟ ವಾಚ್, ಡಿಜಿಟಲ್ ವಾಚ್ ತರುವುದನ್ನು ನಿಷೇಧಿಸಿದ್ದು, ಮುಖ್ಯ ಅಧೀಕ್ಷಕರು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಿಳಿಸಿದರು. ಪರೀಕ್ಷೆಗೆ 80 ವಾಹನಗಳ ವ್ಯವಸ್ಥೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಮಾತನಾಡಿ ಕೋವಿಡ್ ಹಿನ್ನಲೆಯಲ್ಲಿ ಸರಕಾರ ಪರೀಕ್ಷಾ ವಿಧಾನವನ್ನು ಸರಳೀಕರಿಸಿ ಎರಡು ದಿನಗಳಿಗೆ ಸೀಮಿತಗೊಳಿಸಿದೆ. ಬಹು ಆಯ್ಕೆ ಪ್ರಶ್ನೆಯ ಮಾದರಿಯ ವಿಷಯವಾರು 40 ಅಂಕಗಳ ಪರೀಕ್ಷೆ ನಡೆಸಲಾಗುತ್ತಿದೆ. ಮೂರು ಭಾಷಾ ವಿಷಯಗಳು ಒಳಗೊಂಡಂತೆ 120 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಮತ್ತು ಮೂರು ಕೋರ್ ವಿಷಯಗಳನ್ನು ಒಳಗೊಂಡಂತೆ 120 ಅಂಕಗಳ ಒಂದು ಪ್ರಶ್ನೆ ಪತ್ರಿಕೆ ಒಳಗೊಂಡಿರುತ್ತದೆ. ಈ ಪಶ್ನೆ ಪತ್ರಿಕೆ ಎಲ್ಲ ವಿಧದ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ ಎಂದು ತಿಳಿಸಿದರು.
ಪರೀಕ್ಷೆಗಳು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ವರೆಗೆ ನಡೆಯಲಿದೆ. ಜುಲೈ 19 ರಂದು ಕೋರ್ ವಿಷಯಗಳನ್ನೊಳಗೊಂಡ ಪತ್ರಿಕೆ ನಡೆದರೆ, ಜುಲೈ 22 ರಂದು ಭಾಷಾ ಮೂರು ಭಾಷಾ ವಿಷಯಗಳು ಒಳಗೊಂಡ ಪತ್ರಿಕೆ ಪರೀಕ್ಷೆ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ಇಲಕಲ್ಲ ಡಯಟ್ ಪ್ರಾಚಾರ್ಯ ಬಿ.ಕೆ.ನಂದನೂರ, ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ಖಜಾನೆ ಇಲಾಖೆಯ ಉಪನಿರ್ದೇಶಕ ಆನಂದ ಮುಚ್ಚಂಡಿ, ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎಸ್.ಎಸ್.ಹಾಲವರ, ವಿಷಯ ನಿರ್ವಾಹಕ ಬಸವರಾಜ ಹಾಲಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಿಸಿಸಿ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪನೆ
ಕೋವಿಡ್ ದೃಡಪಟ್ಟ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಪ್ರತಿ ತಾಲೂಕಿಗೆ ಒಂದರಂತೆ ಕೋವಿಡ್ ಕೇರ್ ಸೆಂಟರ್(ಸಿಸಿಸಿ) ಸ್ಥಾಪಿಸಲಾಗುತ್ತಿದೆ. ಕೋವಿಡ್ ಕೇರ್ ಸೆಂಟರನಲ್ಲಿ ಪಾಜಿಟಿವ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು.
– ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ