ನಿಮ್ಮ ಸುದ್ದಿ ಬಾಗಲಕೋಟೆ
ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಅವ್ಯವಸ್ಥೆಗೆ ಆಸ್ಪದ ನೀಡದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಸಂಗಮೇಶ್ವರ ಸಂಯುಕ್ತ ಪಪೂ ಕಾಲೇಜ್ನ ಮುಖ್ಯ ಅಧೀಕ್ಷಕ ಆರ್.ಜಿ.ಸನ್ನಿ ತಿಳಿಸಿದರು.
ಕಾಲೇಜ್ನಲ್ಲಿ ಶನಿವಾರ ಪರೀಕ್ಷೆ ಕುರಿತ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ಮಾದರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ವ್ಯವಸ್ಥೆಯೊಂದಿಗೆ ಪರೀಕ್ಷೆ ಕೇಂದ್ರ ಸಿದ್ಧವಾಗಿದ್ದು ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯಬಹುದು ಎಂದರು.
ಕೇಂದ್ರದಲ್ಲಿ ಸ್ಥಳೀಯ ೪ ಪ್ರೌಢಶಾಲೆ ವಿದ್ಯಾರ್ಥಿಗಳು ಸೇರಿದಂತೆ ಸೂಳೇಬಾವಿ, ಬೇವಿನಮಟ್ಟಿ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆಂದು ೩೬೫ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕೋಣೆಯಲ್ಲಿ ೧೨ ವಿದ್ಯಾರ್ಥಿಗಳಂತೆ ೩೧ ಪರೀಕ್ಷೆ ಕೋಣೆ ಸಿದ್ದವಾಗಿದ್ದು ೨ ವಿಶೇಷ ಕೋಣೆಗಳು ಇವೆ ಎಂದು ಹೇಳಿದರು.
ಕೋಣೆ ಮೇಲ್ವಿಚಾರಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಆಯಾ ವಿಷಯ ಶಿಕ್ಷಕರನ್ನು ಅಂದಿನ ಪರೀಕ್ಷೆಗೆ ನಿಯೋಜಿಸದಿರುವುದು, ಮೇಲ್ವಿಚಾರಕರಿಗೆ ಮೊಬೈಲ್ ನಿಷೇದ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ನಿಯಮಾವಳಿಯಂತೆ ಎಲ್ಲ ಸೂಚನೆಗಳನ್ನು ಪಾಲಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಉಪಮುಖ್ಯ ಅಧೀಕ್ಷಕ ಎಂ.ಎಂ.ನಾರಗಲ್, ಅಧೀಕ್ಷಕ ಸಿ.ಬಿ.ಉಪನಾಳ ಹಾಗೂ ಪರೀಕ್ಷೆ ನಿಯೋಜನೆಯಾದ ಮೇಲ್ವಿಚಾರಕರು ಇದ್ದರು.