ನಿಮ್ಮ ಸುದ್ದಿ ಬಾಗಲಕೋಟೆ
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ಬರುವ ಭಾರತ ಸೇವಾ ಯೋಜನೆಗೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ನವನಗರದ ಹರಿಪ್ರೀಯಾ ಹೋಟಲ್‍ನಲ್ಲಿ ಸೋಮವಾರ ಭಾರತ ಸೇವಾ, ಚಾನಲ್ ಪಾಟ್ನರ್ಸ್ ಸಹಯೋಗದಲ್ಲಿ ಹಮ್ಮಿಕೊಂಡ ಭಾರತ ಸೇವಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯಾದ್ಯಂತ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿಯೂ ಸಹ ಈ ಯೋಜನೆಗೆ ಚಾಲನೆ ನೀಡಲಾಗಿದೆ.
ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಭಾರತ ಯೋಜನೆಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿಕ್ಷಣ, ಆರೋಗ್ಯ, ಆರ್ಥಿಕವಾಗಿ ಸದೃಡವಾದಾಗ ಮಾತ್ರ ಮನುಷ್ಯ ಉತ್ತಮ ಜೀವನ ನಡೆಸಲು ಸಾದ್ಯವಾಗುತ್ತದೆ. ತನ್ನ ಕುಟುಂಬಕ್ಕೆ ಆಧಾರ ಸ್ತಂಬವಾಗುವದರ ಜೊತೆಗೆ ಇತರರ ಕುಟುಂಬಕ್ಕೆ ಉದ್ಯೋಗ ನೀಡುವ ಕೆಲಸವಾಗಬೇಕು. ಪ್ರತಿಯೊಬ್ಬರು ಉತ್ತಮ ಆರೋಗ್ಯ, ಕನಿಷ್ಠ ಶಿಕ್ಷಣ ಹೊಂದಿದಾಗ ಮಾತ್ರ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ. ದೇಶದಲ್ಲಿ ಉದ್ಯೋಗ ಮಾಡಲು ಸಾಕಷ್ಟು ಅವಕಾಶಗಳಿವೆ. ಉದ್ಯೋಗ ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಆಸ್ತಿ ಮಾಡುವ ಮೂಲಕ ಸರಕಾರಿ ನೌಕರಿಯನ್ನು ಹುಡುಕುವ ಕೆಲಸವಾಗಬಾರದು. ಸರಕಾರಿ ನೌಕರಿ ಮೇಲೆ ಅವಲಂಬನೆ ಸಹ ಇರಬಾರದು. ನಮ್ಮ ಕಾಲ ಮೇಲೆ ನಾವು ನಿಂತು ಇನ್ನೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕು. ಇದರ ಜೊತೆಗೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಜನರಲ್ಲಿ ಬದಲಾವಣೆ ಕಲ್ಪನೆ ಮೂಡಬೇಕು. ಹಳೆಯದರ ಮೇಲೆ ಅವಲಂಬನೆಯಾಗಬಾರದೆಂದು ಚರಂತಿಮಠ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾ ಮತ್ತು ಸಾರ್ವಿ ಮೆಡಿಯಾ ಪ್ರಾವೈಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಡಾ.ಅನೀಲಕುಮಾರ ಮಾತನಾಡಿ ಆತ್ಮ ನಿರ್ಭರ ಭಾರತ ಯೋಜನೆಯು ಪ್ರಧಾನಮಂತ್ರಿಗಳು ಕಲ್ಪಿಸಿದ ಹೊಸ ಭಾರತದ ದೃಷ್ಠಿಕೋನವಾಗಿದ್ದು, ದೇಶದಲ್ಲಿನ ಪ್ರಜೆಗಳನ್ನು ಸ್ವತಂತ್ರ ಮತ್ತು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆ ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆ ಸ್ತಂಬಗಳನ್ನು ಒಳವೊಂಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯೋಜನೆಯ ಪ್ರತಿನಿಧಿಗಳಿಗೆ ಪ್ರಶಂಸನಾ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ರಾಜು ನಾಯ್ಕರ, ಭಾರತ ಸೇವಾ ಯೋಜನೆಯ ಚಾನೆಲ್ ಪಾಟ್ನರ್ಸ್ ಪ್ರವೀಣ ಕುಮಾರ ಸುರಕೋಡ, ಆನಂದ ದೇವಾಡಿಗ, ರಾಜ್ಯ ಕೋ-ಆರ್ಡಿನೇಟರ್ ಅನಿತಾ ಆನಂದ ಸೇರಿದಂತೆ ಇತರರರು ಉಪಸ್ಥಿತರಿದ್ದರು.