ನಿಮ್ಮ ಸುದ್ದಿ ಬಾಗಲಕೋಟೆ
ಸಿಬ್ಬಂದಿ ಸಹಕಾರದೊಂದಿಗೆ ಪಟ್ಟಣಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹುನಗುಂದ ತಾಲೂಕು ಅಮೀನಗಡ ಪಟ್ಟಣ ಪಂಚಾಯಿತಿ ನೂತನ ಮುಖ್ಯಾಕಾರಿ ಮಹೇಶ ನಿಡಶೇಶಿ ತಿಳಿಸಿದರು.
ಪಪಂಗೆ ನೂತನವಾಗಿ ಮುಖ್ಯಾಧಿಕಾರಿ ಆಗಿ ಆಗಮಿಸಿದ ಅವರು ಸಿಬ್ಬಂದಿಯಿಂದ ಸ್ವಾಗತಗೊಂಡು ಮಾತನಾಡಿದರು. ಪ್ರತಿ ಮುಖ್ಯಾಧಿಕಾರಿಯೂ ತಾನು ಕಾರ್ಯ ನಿರ್ವಹಿಸುವ ಪಟ್ಟಣ ಹಾಗೂ ಅಲ್ಲಿನ ಜನತೆಗೆ ಯಾವ ಸೌಲಭ್ಯಗಳನ್ನು ಸರಕಾರದಿಂದ ದೊರಕಿಸಬೇಕೆಂಬ ಮುಂದಾಲೋಚನೆ ಅಗತ್ಯ. ಆ ನಿಟ್ಟಿನಲ್ಲಿ ಇಲ್ಲಿನ ಅವಶ್ಯಕ ಸೌಲಭ್ಯಗಳ ಕುರಿತು ಸಿಬ್ಬಂದಿ ಹಾಗೂ ಖುದ್ದಾಗಿ ಪಟ್ಟಣದಲ್ಲಿ ಸಂಚರಿಸಿ ಸೂಕ್ತ ಯೋಜನೆ ರೂಪಿಸಲಾಗುವುದು ಎಂದರು.
ಕಚೇರಿಗೆ ಬಂದ ಸಾರ್ವಜನಿಕರಿಗೆ ವಿನಾಕಾರಣ ಅಲೆದಾಡಿಸದೆ ಅವಶ್ಯಕ ದಾಖಲೆ ಶೀಘ್ರ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಕಚೇರಿಯಲ್ಲಿ ಆಯಾ ಸಿಬ್ಬಂದಿಯ ಕರ್ತವ್ಯವೇನು ಎಂಬುದರ ಕುರಿತು ಮಾಹಿತಿ ದೊರೆಯುವಂತೆ ಮಾಡಿ ಸಾರ್ವಜನಿಕರ ಕೆಲಸ ಸರಳೀಕರಣಗೊಳಿಸಲಾಗುವುದು. ಜತೆಗೆ ಮೂವ್‌ಮೆಂಟ್ ರಜಿಸ್ಟರ್‌ನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ಪಪಂ ಸಿಬ್ಬಂದಿಗಳಾದ ಜೆ.ಡಿ.ಹೆಬ್ಳೀಕರ, ಸಂತೋಷ ವ್ಯಾಪಾರಿಮಠ, ಐ.ಎಲ್.ಗುಡ್ಡದ, ಶ್ವೇತಾ ಚಲ್ಮಿ, ಮಂಜು ಪೂಜಾರಿ, ಸೈಯದ್ ಅಗ್ನಿ, ಗುತ್ತಿಗೆದಾರರಾದ ರೇಣುಕಾ ರಾಠೋಡ ಇತರರು ಇದ್ದರು.