ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಮಟ್ಟದಲ್ಲಿ ನಡೆಯುವ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೆಮಾಸಿಕ ಪ್ರಗತಿ ಪರಿಶೀಲನೆ ಸಭೆಯಂತೆ ಗ್ರಾಮ ಮಟ್ಟದಲ್ಲೂ ಇಂತಹ ಸಭೆ ನಡೆಸಬೇಕೆಂಬ ಸರಕಾರ ಆದೇಶದಂತೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರ ಗ್ರಾಮದಲ್ಲೂ ಪ್ರಥಮ ಕೆಡಿಪಿ ಸಭೆ ನಡೆಯಿತು.
ಕೆಲೂರ ಗ್ರಾಪಂ ವ್ಯಾಪ್ತಿಯ ಕೆಲೂರ, ತಳ್ಳಿಕೇರಿ ಹಾಗೂ ಕುಣಿಬೆಂಚಿ ಗ್ರಾಮಗಳ ಸಂಬಂಧಿಸಿದ ಅಧಿಕಾರಿಗಳು, ಶಾಲೆ ಶಿಕ್ಷಕರು, ಅಂಗನವಾಡಿ, ಆಶಾ ಹಾಗೂ ಆರೋಗ್ಯ, ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆ ಸಿಬ್ಬಂದಿ ಹಾಜರಿದ್ದರು.
ಗ್ರಾಪಂ ಅಧ್ಯಕ್ಷ ಮಹಾಲಿಂಗ ನಾಡಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಡಿಪಿ ಸಭೆ ನಡೆಸಿದ ಅಭಿವೃದ್ಧಿ ಅಧಿಕಾರಿ ಪಿ.ಬಿ.ಮುಳ್ಳೂರ, ಹಾಜರಿದ್ದ ಆಯಾ ಇಲಾಖೆ ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದರು. ತಮ್ಮ ಗ್ರಾಮಕ್ಕೆ ಆಯಾ ಇಲಾಖೆಯಿಂದ ಇರುವ ಯೋಜನೆಗಳು, ಎಷ್ಟು ಫಲಾನುಭವಿಗೆ ಯೋಜನೆಗಳು ತಲುಪಿವೆ, ಇನ್ನೂ ಆಗಬೇಕಾದ ಕಾರ್ಯಗಳೇನು? ಎಂಬ ಇಂಚಿಂಚೂ ಮಾಹಿತಿ ಪಡೆದರು.
ಕೃಷಿ ಇಲಾಖೆ ಅಧಿಕಾರಿ ಆರ್.ಬಿ.ಚಿಕ್ಕೂರ ತಮ್ಮ ಇಲಾಖೆ ಕುರಿತು ಮಾಹಿತಿ ನೀಡುವಾಗ ಮದ್ಯೆ ಪ್ರವೇಶಿಸಿದ ಪಿಡಿಒ ಪಿ.ಬಿ.ಮುಳ್ಳೂರ, ಇದು ವಾಟರ್‌ಶೆಡ್ ಏರಿಯಾ ಆಗಿರುವುದರಿಂದ ಮುಖ್ಯವಾಗಿ ಚೆಕ್‌ಡ್ಯಾಂಗಳ ನಿರ್ಮಾಣವಾಗಬೇಕಿದೆ. ಅದು ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೆ ಚೆಕ್‌ಡ್ಯಾಂಗಳ ನಿರ್ಮಾಣದ ಪಟ್ಟಿ ತಮ್ಮ ಇಲಾಖೆಗೆ ನೀಡಿದ್ದು ಮುಂದಿನ ಬೇಸಿಗೆಯೊಳಗೆ ಚೆಕ್‌ಡ್ಯಾಂ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು.
ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲ್ಲ ಶಾಲೆಗಳಲ್ಲೂ ಗ್ರಾಪಂನಿಂದ ಸ್ಮಾರ್ಟ್ ಕ್ಲಾಸ್‌ಗೆ ಅವಶ್ಯವಾದ ಲ್ಯಾಪ್‌ಟಾಪ್, ಪ್ರೊಜೆಕ್ಟರ್ ಸೇರಿದಂತೆ ಕೆಲ ಅನುಕೂಲ ಕಲ್ಪಿಸಲಾಗಿದೆ. ಕೆಲ ಶಾಲೆಗಳಲ್ಲಿ ಇನ್ನೂ ಶಿಕ್ಷಕರು ಸ್ಮಾರ್ಟ್ ಕ್ಲಾಸ್‌ಗೆ ಹೊಂದಿಕೊಂಡಂತೆ ಕಾಣುತ್ತಿಲ್ಲ. ಕೂಡಲೆ ಎಲ್ಲರೂ ಸ್ಮಾರ್ಟ್ ಕ್ಲಾಸ್‌ಗಳು ಆರಂಭವಿರುವಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಸೂಚನೆ ನೀಡಿದರು.
ಕೋವಿಡ್ ತಡೆಗಾಗಿ ಲಸಿಕೆ ಪಡೆಯುವುದು ಕಡ್ಡಾಯವಾಗಿದ್ದು ಇದರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವವಾಗಿದ್ದು ನಿಮ್ಮ ವ್ಯಾಪ್ತಿಯಲ್ಲಿನ ಜನತೆಗೆ ಲಸಿಕೆ ಕೊಡಿಸುವ ಜವಾಬ್ದಾರಿ ನಿಮ್ಮದಾಗಿದೆ. ಜನರೊಂದಿಗೆ ಹೆಚ್ಚಾಗಿ ಬೆರೆಯುವ ನೀವುಗಳು ಎಲ್ಲರೂ ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ಸಭೆಗೆ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾಕರು, ಹೆಸ್ಕಾಂ ಸಿಬ್ಬಂದಿ, ಗ್ರಂಥಾಲಯ, ಅರಣ್ಯ, ಕೃಷಿ, ಶಿಕ್ಷಣ ಇಲಾಖೆ ಸಿಬ್ಬಂದಿ ತಮ್ಮ ಇಲಾಖೆ ಅಭಿವೃದ್ಧಿ ಹಾಗೂ ಮಾಹಿತಿ ನೀಡಿದರು.
ಗ್ರಾಪಂ ಕಾರ್ಯದರ್ಶಿ ಎಸ್.ಜಿ.ಹಿರೇಮಠ, ಉಪಾಧ್ಯಕ್ಷೆ ಮಲ್ಲವ್ವ ಗೌಡರ, ಪಿಕೆಪಿಎಸ್ ಕಾರ್ಯದರ್ಶಿ ಎಸ್.ಆರ್.ಮೇಟಿಮಠ, ವಿನೋದ ಬೊಂಬ್ಲೇಕರ, ಅಂಗನವಾಡಿ ಮೇಲ್ವಿಚಾರಕರಾದ ಟಿ.ಎಸ್.ಕೊರ್ತಿ, ಸುಜಾತಾ.ಎಂ., ಸಿ.ಟಿ.ಭಜಂತ್ರಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.