ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸಿ : ಎಡಿಸಿ ಮುರಗಿ
ನಿಮ್ಮ ಸುದ್ದಿ ಬಾಗಲಕೋಟೆ
ಇತ್ತೀಚಿನ ಮಳೆಯಿಂದ ಬೆಳೆ ಹಾನಿ ಅನುಭವಿಸಿದ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಸೂಕ್ತ ಪರಿಹಾರ ಒದಗಿಸಲು ಕ್ರಮವಹಿಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪಿಎಂಎಫ್‍ಬಿವಾಯ್ ಯೋಜನೆಯಡಿ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯೋಜನಾ ಮಾರ್ಗಸೂಚಿಯಂತೆ ಬೆಳೆ ಹಾನಿ ಸಂಭವಿಸಿದ ರೈತರು ಸಂಬಂಧಿಸಿದ ವಿಮಾ ಸಂಸ್ಥೆಗೆ ನೇರವಾಗಿ ಅಥವಾ ಹಣಕಾಸು ಸಂಸ್ಥೆ, ಅನುಷ್ಠಾನ ಇಲಾಖೆಗಳ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ ನವೆಂಬರ 1 ರಿಂದ 25 ವರೆಗಿನ ಕೆಎಸ್‍ಎನ್‍ಡಿಎಂಸಿ ವರದಿಯನ್ವಯ ಜಿಲ್ಲೆಯಲ್ಲಿ 22.4 ಎಂಎಂ ಪೈಕಿ 49.6 ಎಂಎಂ ರಷ್ಟು ಮಳೆಯಾಗಿರುತ್ತದೆ. ಹುನಗುಂದ, ಗುಳೇದಗುಡ್ಡ ಹಾಗೂ ಇಲಕಲ್ಲ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ. 60 ಕ್ಕಿಂತ ಹೆಚ್ಚು ಮತ್ತು ಸಾಮಾನ್ಯ ಮಳೆಯಿಂದ ಡಿಇಪಿಗಿಂತ ಹೆಚ್ಚುವರಿ ಎಂದು ಪರಿಗಣಿಸಲಾಗುತ್ತಿದೆ. ಈ ಆಧಾರದ ಮೇಲೆ ಎಲ್ಲ ತಾಲೂಕುಗಳಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, ಬೆಳೆ ವಿಮೆ ಮಾಡಿದ ರೈತರಿಗೆ ಬೆಳೆ ಹಾನಿಯಾದಲ್ಲಿ ಪರಿಹಾರ ಒದಗಿಸಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಮುಂಗಾರು ಹಂಗಾಮಿನ ಎಲ್ಲ ಬೆಳೆಗಳ ಕಟಾವು ದಿನಾಂಕಗಳು ಮುಕ್ತಾಯಗೊಂಡಿದ್ದು, ಕೇವಲ ತೊಗರಿ, ಕೆಂಪು ಮೆಣಸಿನಕಾಯಿ, ಹತ್ತಿ ಬೆಳೆಗಳು ಡಿಸೆಂಬರ ತಿಂಗಳಿನಲ್ಲಿ ಕಟಾವಣೆಯಾಗಬೇಕಿದೆ. ಮುಂಗಾರು ಬೆಳೆಗಳ ಪೈಕಿ ಅತಿ ಹೆಚ್ಚಿನ ಹಾನಿಯು ತೊಗರಿ ಬೆಳೆಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಎಲ್ಲ ಬೆಳೆಗಳಿಗೆ ಮಧ್ಯಋತು ಪ್ರತಿಕೂಲತೆ ಕಾರಣದಿಂದಾಗಿ ಅಥವಾ ಸ್ಥಳೀಯ ವಿಪತ್ತು ಅಡಿ ಪರಿಹಾರ ಒದಗಿಸಬೇಕಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲರು ಎಲ್ಲ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಬೆಳೆ ವಿಮೆ ಪ್ರತಿನಿಧಿಗಳು ಕೋರಿರುವಂತೆ ವಿಮಾ ಘಟಕವಾರು ಬೆಳೆ ಆವರಿಕೆ ಕ್ಷೇತ್ರ ಹಾಗೂ ಹಾನಿಗೊಳಗಾದ ಕ್ಷೇತ್ರದ ಮಾಹಿತಿಯನ್ನು ಒದಗಿಸಲು ಸೂಚಿಸಿದರು. ಬೆಳೆ ವಿಮೆ ಪ್ರತಿನಿಧಿಗಳು ಸ್ಥಳೀಯ ವಿಪತ್ತು ಅಡಿ, ಬೆಳೆಹಾನಿ ಪರಿಹಾರಕ್ಕಾಗಿ ರೈತರಿಂದ ಅರ್ಜಿ ಸ್ವೀಕರಿಸುವ ಬಗ್ಗೆ ತಾಲೂಕಿನಲ್ಲಿ ತಮ್ಮ ಪ್ರತಿನಿಧಿಗಳ ಮುಖಾಂತರ ಪ್ರಚಾರ ಕೈಗೊಳ್ಳಲು ಕೋರಿದರು.
ಬೆಳೆ ವಿಮೆ ಪ್ರತಿನಿಧಿಗಳು ಮಾತನಾಡಿ ಮುಂಗಾರು ಬೆಳೆಗಳಿಗೆ ಮಧ್ಯ ಋತು ಪ್ರತಿಕೂಲತೆ ಕಾರಣದಿಂದಾಗಿ ಅನ್ವಯವಾಗುವ ಬಗ್ಗೆ ತಮ್ಮ ಕೇಂದ್ರ ಕಛೇರಿಯನ್ನು ಸಂಪರ್ಕಿಸಿ ನವೆಂಬರ 30 ರೊಳಗಾಗಿ ತಿಳಿಸಲಾಗುವೆಂದರು. ಇಲಾಖಾ ವತಿಯಿಂದ ಪೂರಕ ಮಾಹಿತಿಯನ್ನು ಒದಗಿಸಲು ಕೋರಿದರು. ಕಟಾವು ನಂತರದ ಹಾಗೂ ಸ್ಥಳೀಯ ವಿಪತ್ತು ಅಡಿ ಸ್ವೀಕೃತವಾಗುವ ರೈತರ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಪರಿಹಾರ ಒದಗಿಸುವುದಾಗಿ ಸಭೆಗೆ ತಿಳಿಸಿದರು.
ಬೆಳೆ ವಿಮೆ ಮಾಡಿಸಿದ ರೈತರು ಇತ್ತಿಚಿನ ಮಳೆಯಿಂದ ಬೆಳೆಹಾನಿ ಅನುಭವಿಸಿದ್ದಲ್ಲಿ ಆದಷ್ಟು ಬೇಗನೆ ಅಂದರೆ ಮುಂಬರುವ 2-3 ದಿನಗಳಲ್ಲಿ ನೇರವಾಗಿ ತಮ್ಮ ತಾಲೂಕಿನ ಪ್ರತಿನಿಧಿಗಳಿಗೆ ಅಥವಾ ಮೊಬೈಲ್ ಆಪ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಗೋಪಾಲರೆಡ್ಡಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ನ್ಯಾಮಗೌಡ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎಂ.ಜಿ.ಕೊಣ್ಣೂರ ಸೇರಿದಂತೆ ಬಜಾಜ್ ಅಲಿಯಾಂಜ್ ವಿಮಾ ಕಂಪನಿಯ ಪ್ರತಿನಿಧಿಗಳು ಸೇರಿದಂತೆ ವಿವಿಧ ಎಫ್‍ಪಿಓಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.