- ನಿಮ್ಮ ಸುದ್ದಿ ಬಾಗಲಕೋಟೆ
ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ಪರಿಶಿಷ್ಟ ಜಾತಿಯ ಅಲೆಮಾರಿ ಜನಾಂಗದ ಸುಡುಗಾಡ ಸಿದ್ಧರ ಕಾಲೋನಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ್ ಪೋತದಾರ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿದರು.
ಸದರಿ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಚರಂಡಿ ವ್ಯವಸ್ಥೆ ಸಮಸ್ಯೆ ಹಾಗೂ ಹಲವು ವರ್ಷಗಳಿಂದ ಎದುರಿಸುತ್ತಿರುವ ನಿವೇಶನ ಸಮಸ್ಯೆಗಳ ಕುರಿತು ಸುಡುಗಾಡ ಸಿದ್ಧ ಕಾಲೋನಿಯ ಜನರ ಜೊತೆ ಚರ್ಚಿಸಿ ಸದರಿ ವಿಷಯಗಳ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಸದರಿ ಕಾಲೋನಿ ಜನರಿಗೆ ಕೋವಿಡ್-19 ನಿಯಮಗಳನ್ನು ಪಾಲಿಸಲು ಸಲಹೆ ನೀಡಿದರು. ಅಲೆಮಾರಿ ಜನಾಂಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಸರಕಾರಿ ಸೌಲಭ್ಯಗಳು ಕುರಿತು ತಿಳಿಸಿ, ವಸತಿ ನಿಲಯ, ವಿದ್ಯಾರ್ಥಿವೇತನ ಹಾಗೂ ವಸತಿ ಶಾಲೆಗಳ ಪ್ರಯೋಜನ ಪಡಿಯುವಂತೆ ಅರಿವು ಮೂಡಿಸಿದರು.
ನಂತರ ಅಲೆಮಾರಿ ಅಭಿವೃದ್ಧಿ ಕೋಶ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಹತ್ತು ಜನ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ,ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದನ್ನು ಪರಿಶೀಲಿಸಿ, ಅಂತಿಮ ಕಂತಿನ ಅನುದಾನವನ್ನು ಒಂದು ವಾರದೊಳಗಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಅಧೀಕ್ಷಕರಾದ ಗೋಪಾಲ್ ಲಮಾಣಿ, ಮುಧೋಳ ತಾಲೂಕ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಕುಂಬಾರ, ಕಚೇರಿ ಸಿಬ್ಬಂದಿ ಅಶೋಕ್ ಉಪಸ್ಥಿತರಿದ್ದರು. ಸುಡುಗಾಡ ಸಿದ್ಧರ ಕಾಲೋನಿಯ ಶಂಕರ್ ರುದ್ರಾಕ್ಷಿ, ತಿಪ್ಪಣ್ಣ ಅಗಸದವರ, ಬಾಲಕೃಷ್ಣ ವಿಭೂತಿ,ಮಾರಪ್ಪ ವಿಭೂತಿ ಹಾಗೂ ಇತರರು ಉಪಸ್ಥಿತರಿದ್ದರು.