ಸ್ವಚ್ಚ ವಾಹಿನಿಗೆ ಇನ್ನು ಮುಂದೆ ಮಹಿಳಾ ಸಾರತಿ : ಸಿಇಓ ಭೂಬಾಲನ್
ನಿಮ್ಮ ಸುದ‌್ದಿ ಬಾಗಲಕೋಟೆ
ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ತ್ಯಾಜ್ಯ ಸಂಗ್ರಹಣೆಗೆ ಇನ್ನು ಮುಂದೆ ಸ್ವಚ್ಛ ವಾಹಿನಿಗೆ ಮಹಿಳೆಯರೆ ಸಾರತಿಯಾಗಲಿದ್ದಾರೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಹೇಳಿದರು.
ವಿದ್ಯಾಗಿರಿಯ ಬಿವಿವ ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆಯ ಸಭಾಭವನದಲ್ಲಿ ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಹಮ್ಮಿಕೊಂಡ ಮಹಿಳೆಯರಿಗಾಗಿ ಲಘು ವಾಹನ ಚಾಲನಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಜಿ.ಪಂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚನೆಯಾದ ಮಹಿಳಾ ಒಕ್ಕೂಟ ಹಾಗೂ ಸ್ವ-ಸಹಾಯ ಸಂಘದ 50 ಜನ ಸದಸ್ಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ ಎಂದರು.
ಮಹಿಳಾ ಒಕ್ಕೂಟದ ಸದಸ್ಯರಿಗೆ 30 ದಿನಗಳ ಕಾಲ ಉಚಿತವಾಗಿ ಚಾಲನಾ ತರಬೇತಿ ನೀಡುವ ಜೊತೆಗೆ ವಾಹನ ಚಾಲನಾ ಲೈಸನ್ಸ್ ಕೊಟ್ಟು ಅವರನ್ನು ಸ್ವಾವಲಂಭಿಗಳನ್ನಾಗಿ ಮಾಡಲು ಬಾಗಲಕೋಟೆ ಜಿಲ್ಲಾ ಪಂಚಾಯತ ಮುಂದಾಗಿರುವುದು ರಾಜ್ಯದಲ್ಲೇ ಮೊದಲು ಎಂದರು.
ತರಬೇತಿ ನಂತರ ಮಹಿಳೆಯರನ್ನು ಸ್ವಚ್ಛ ವಾಹಿನಿಗೆ ಸಾರತಿಯನ್ನಾಗಿ ಮಾಡಲಾಗುತ್ತಿದೆ. ಇನ್ನು ಮುಂದೆ ಮಹಿಳೆಯರಿಗೆ ತ್ಯಾಜ್ಯ ಸಂಗ್ರಹಣೆಗೆ ವಾಹನ ಚಾಲನೆ ಮಾಡಿಕೊಂಡು ಮನೆಯ ಬಾಗಿಲಿಗೆ ಬರಲಿದ್ದಾರೆ. ಇದು ಮೆಚ್ಚುಗೆಗೆ ವ್ಯಕ್ತವಾಗುವಂತಹ ವಿಷಯವಾಗಿದೆ ಎಂದರು.
ಅದಕ್ಕಾಗಿ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಒಕ್ಕೂಟದ 50 ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿ ವಿದ್ಯಾಗಿರಿಯಲ್ಲಿರುವ ಬವಿವ ಸಂಘದ ಆರ್‍ಸೆಟ್ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಸಹ ಇನ್ನು ಮುಂದೆ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರಾಗಲಿದ್ದಿರಿ. ಆದ್ದರಿಂದ ತರಬೇತಿಯ ಸಂಪೂರ್ಣ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಬಿ.ಅಂಗಡಿ ಮಾತನಾಡಿ ಮನೆ ಸ್ವಚ್ಛತೆಯನ್ನು ಕಾಪಾಡುತ್ತಿರುವ ಮಹಿಳೆಯರನ್ನು ಗ್ರಾಮ ಸ್ವಚ್ಛತೆಗೆ ತೊಡಗಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಜಿಲ್ಲಾ ಪಂಚಾಯತಿ ವತಿಯಿಂದ ಮಹಿಳಾ ಒಕ್ಕೂಟದ ಸದಸ್ಯರಿಗೆ ವಾಹನ ಚಾಲನಾ ತರಬೇತಿಯ ಜೊತೆಗೆ ಇತರೆ ವಿಷಯಗಳ ಬಗ್ಗೆಯೂ ತರಬೇತಿ ನೀಡಲಾಗುವುದು. ನಾಲ್ಕು ಗಾಲಿ ವಾಹನ ಚಾಲನೆಗೆ ಮಹಿಳೆಯರು ಆಸಕ್ತಿ ತೋರಿಸುತ್ತಿರುವುದು ಹೆಮ್ಮೆಯ ವಿಷಯವೆಂದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ ಯೋಜನಾ ನಿರ್ದೇಶಕ (ಡಿಆರ್‍ಡಿಎ) ಎಂ.ವಿ.ಚಳಗೇರಿ ಅವರು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎನ್.ಆರ್.ಎಲ್.ಎಂ ದಡಿ ರಚನೆಯಾದ ಮಹಿಳಾ ಒಕ್ಕೂಟದ ಸದಸ್ಯರಿಗೆ ವಾಹನ ಚಾಲನೆ ನೀಡಿ ತ್ಯಾಜ್ಯ ನಿರ್ವಹಣೆಗೆ ವಹಿಸುವ ಉದ್ದೇಶದಿಂದ ಪ್ರಾರಂಭಿಕವಾಗಿ 50 ಜನ ಒಕ್ಕೂಟದ ಸದಸ್ಯರಿಗೆ ವಾಹನ ಚಾಲನಾ ತರಬೇತಿ ನೀಡಲಾಗುತ್ತಿದೆ ಎಂದರು.
ತ್ಯಾಜ್ಯ ನಿರ್ವಹಣೆಗೆ ಮಹಿಳೆಯರೆ ಮನೆ ಮನೆಗೆ ವಾಹನ ಚಾಲನೆ ಮಾಡಿಕೊಂಡು ತ್ಯಾಜ್ಯ ಸಂಗ್ರಹಣೆ ಕೆಲಸ ಮಾಡಲಿದ್ದು, 6 ತಿಂಗಳ ಮಟ್ಟಿಗೆ ಗ್ರಾಮ ಪಂಚಾಯತಿಯಿಂದ ಸಂಭಾವನೆ ನೀಡಲಾಗುತ್ತಿದೆ. ನಂತರ ವಾಹನ, ತ್ಯಾಜ್ಯ ಘಟಕ ನೀಡಿ ಸಂಪೂರ್ಣ ನಿರ್ವಹಣೆಗೆ ಒಕ್ಕೂಟಗಳಿಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ಶರಣಬಸವ ಹುನೂರ, ಸಂಸ್ಥೆಯ ತರಬೇತಿದಾರರಾದ ಎಸ್.ಎನ್.ಹಂಚನಾಳ, ಎಸ್.ಸಿ.ಬಿರಾದಾರ, ಜಿ.ಪಂ ಸಹಾಯಕ ಯೋಜನಾಧಿಕಾರಿ ಬಿ.ಡಿ.ತಳವಾರ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಗೋಪಾಲ ಗದಿಗೇನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಿಳಾ ಒಕ್ಕೂಟದ ಸದಸ್ಯರಿಂದ ಮೆಚ್ಚುಗೆ
—————————–
ಗ್ರಾಮ ಮಟ್ಟದಲ್ಲಿ ರಚನೆಯಾದ ಮಹಿಳಾ ಒಕ್ಕೂಟಗಳ ಸದಸ್ಯರಲ್ಲಿ ಒಬ್ಬರಾದ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮ ಪಂಚಾಯತಿಯ ಶಂಭುಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯೆ ರೇಣುಖಾ ಸೇರಿದಂತೆ ಇತರೆ ಸದಸ್ಯರು ವಾಹನ ಚಾಲನಾ ತರಬೇತಿ ಪಡೆಯುತ್ತಿರುವದನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಜಮಖಂಡಿ ತಾಲೂಕಿನ ತುಂಗಳ ಗ್ರಾಮ ಪಂಚಾಯತಿಯ ಕುಂತಳ ದೇವಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯೆ ಸವಿತಾ ನಾಗರೇಶ ಸ್ವಚ್ಛ ವಾಹಿನಿ ವಾಹನ ಚಾಲನೆ ಮಾಡಿದರು.