ಜಿಲ್ಲಾ ಕಾನಿಪ ಅವಿರೋಧ ಆಯ್ಕೆಯ ಪರಂಪರೆ ರಾಜ್ಯಕ್ಕೆ ಮಾದರಿ
ವೃತ್ತಿ ತರಬೇತಿ, ಪುನರ್ಮನನ ಕಾರ್ಯಾಗಾರಕ್ಕೆ ಸಲಹೆ
ಪತ್ರಿಕೋದ್ಯಮ ವೃತ್ತಿಯ ಘನತೆ ಎತ್ತಿ ಹಿಡಿಯಲು ರಾಮ ಮನಗೂಳಿ ಕರೆ
ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆನಂದ ಧಲಬಂಜನ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಎಸ್. ಕಲ್ಯಾಣಿ ಅವರ ನೇತೃತ್ವದ ನೂತನ ಪದಾಧಿಕಾರಿಗಳು ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಆನಂದ ಧಲಬಂಜನ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಎಸ್. ಕಲ್ಯಾಣಿ ಅವರಿಗೆ ಹಿಂದಿನ ಅಧ್ಯಕ್ಷ ಸುಭಾಸ ಹೊದ್ಲೂರ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಶಾಲಗಾರ ಅವರುಗಳು ಅಧಿಕಾರ ಹಸ್ತಾಂತರಿಸಿದರು. ಹಿರಿಯ ಪತ್ರಕರ್ತ ರಾಮ ಮನಗೂಳಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿದ್ದ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಅವರು ಸಂಘದ ನೂತನ ಪದಾಧಿಕಾರಿಗಳು ಶುಭ ಕೋರಿದರು.
ಹಿರಿಯ ಪತ್ರಕರ್ತ ಸುಭಾಸ ಹೊದ್ಲೂರ ಅವರು ಅಧಿಕಾರ ಹಸ್ತಾಂತರಿಸಿ ಮಾತನಾಡಿ, ತಮಗೆ ಸಂದ ಅವಧಿಯಲ್ಲಿ ಮಾಡಿರುವ ಕೆಲಸ, ಸಾಧನೆ ತೃಪ್ತಿ ತಂದಿದೆ, ತಮ್ಮ ಅವಧಿಯಲ್ಲಿ ಮಾರ್ಗದರ್ಶನ ನೀಡಿದ ಹಿರಿಯರು, ಸಹಕಾರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿ ನೂತನ ಪದಾಧಿಕಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ತಿಳಿಸಿದರು.
ನೂತನ ಅಧ್ಯಕ್ಷ ಆನಂದ ಧಲಬಂಜನ ಅವರು ಮಾತನಾಡಿ ನನ್ನನ್ನು ಗುರುತಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ ಹಿರಿಯ ಪತ್ರಕರ್ತರಿಗೂ, ಸಹಕಾರ ನೀಡಿದ ಸಂಘದ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿ ತಮ್ಮ ಅವಧಿಯಲ್ಲಿ ಸಂಘದ ಶಕ್ತಿಯುತ ಸಂಘಟನೆ ಆದ್ಯತೆ ನೀಡಲಾಗುವದು ಜೊತೆಗೆ ಪತ್ರಕರ್ತರಿಗೂ ಸಕಲ ರೀತಿಯ ಸಹಕಾರ ನೀಡುವದರೊಂದಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲಾಗುವದೆಂದು ತಿಳಿಸಿ ಮತ್ತೊಮ್ಮೆ ಪ್ರತಿಯೊಬ್ಬರು ಸಹಕಾರಕ್ಕೆ ಮನವಿ ಮಾಡಿಕೊಂಡರು.
ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯ, ಹಿರಿಯ ಪತ್ರಕರ್ತ ರಾಮ ಮನಗೂಳಿ ಅವರು ಜಿಲ್ಲಾ ಕಾನಿಪದ ಫೇಸಬುಕ್ ಹಾಗೂ ಇ-ಮೇಲ್ ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸಂಘಕ್ಕೆ ಹಿರಿಯರ ಮಾರ್ಗದರ್ಶನದಲ್ಲಿ ಎಲ್ಲರೂ ಒಟ್ಟಾಗಿ ಅವಿರೋಧ ಆಯ್ಕೆ ಮಾಡುವ ಮೂಲಕ ರಾಜ್ಯ ಘಟಕದಲ್ಲಿ ಬಾಗಲಕೋಟೆ ಜಿಲ್ಲಾ ಕಾನಿಪ ಘಟಕ ಮಾದರಿಯಾಗಿದೆ ಎಂದು ಹೇಳಿ ಬರುವ ಅವಧಿಯಲ್ಲಿಯೂ ನಾಮಪತ್ರ ಸಲ್ಲಿಕೆಯಾಗದೇ ಅವಿರೋಧ ಆಯ್ಕೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಕರೆ ನೀಡಿದರು.
ಮಾಧ್ಯಮ ಅಕಾಡೆಮಿಯ ಆಶ್ರಯದಲ್ಲಿ ಪತ್ರಕರ್ತರಿಗೆ ವೃತ್ತಿ ತರಬೇತಿ, ಪುನರ್ಮನನ ಕಾರ್ಯಾಗಾರಗಳ ಮೂಲಕ ಜವಾಬ್ದಾರಿಯುತ ಪತ್ರಕರ್ತರನ್ನು ಸಜ್ಜುಗೊಳಿಸುವ ಕಾರ್ಯ ಸಂಘ ಆಶ್ರಯದಲ್ಲಿ ನಡೆಯಬೇಕೆಂದು ಕರೆ ನೀಡಿದ ರಾಮ ಮನಗೂಳಿ ಅವರು ಅಕ್ಷರ ವ್ಯಭಿಚಾರಕ್ಕಿಳಿಯದೇ ಪತ್ರಿಕೋದ್ಯಮ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಿ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿದ್ದ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಅವರು ಮಾತನಾಡಿ ಬಾಗಲಕೋಟೆ ಜಿಲ್ಲಾ ಕಾನಿಪಕ್ಕೆ ಈವರೆಗೂ ಅವಿರೋಧ ಆಯ್ಕೆಯ ಪರಂಪರೆ ಮುಂದುವರೆದಿರುವದು ಹೆಮ್ಮೆ, ಇಲ್ಲಿನ ಪತ್ರಿಕೋದ್ಯಮದ ಪರಿಸರ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿ ಸಂಘಕ್ಕೆ, ಪತ್ರಕರ್ತರಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಮ ಮನಗೂಳಿ ಹಾಗೂ ಚುನಾವಣಾಧಿಕಾರಿಯಾಗಿದ್ದ ಮಂಜುನಾಥ ಸುಳ್ಳೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಂ.ಎನ್. ಶಾಲಗಾರ ಸ್ವಾಗತಿಸಿದರು. ಅಭಯ ಮನಗೂಳಿ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಜಿಲ್ಲಾ ಕಾನಿಪ ಪ್ರಧಾನ ಕರ್ಯದರ್ಶಿ ಶಂಕರ ಎಸ್. ಕಲ್ಯಾಣಿ ವಂದಿಸಿದರು.
ಅಧಿಕಾರ ಸ್ವೀಕರಿಸಿದ ನೂತನ ಪದಾಧಿಕಾರಿಗಳು
ಜಿಲ್ಲಾ ಕಾನಿಪದ ನೂತನ ಅಧ್ಯಕ್ಷರಾಗಿ ಆನಂದ ದಲಭಂಜನ, ಉಪಾಧ್ಯಕ್ಷರಾಗಿ ಉಮೇಶ ಪೂಜಾರಿ, ಸಿ.ಸಿ.ಚಂದ್ರಪಟ್ಟಣ, ಮಲ್ಲಿಕಾರ್ಜುನ ಮಠ, ಪ್ರಧಾನ ಕಾರ್ಯದರ್ಶಿಯಾಗಿ ಶಂಕರ ಎಸ್. ಕಲ್ಯಾಣಿ, ಕಾರ್ಯದರ್ಶಿಗಳಾಗಿ ಗುರುಚಿದಾನಂದ ಹಿರೇಮಠ, ಮಲ್ಲಿಕಾರ್ಜುನ ತುಂಗಳ, ಸುಧೀರ ಕಲಕೇರಿ, ಖಜಾಂಚಿಯಾಗಿ ಜಗದೀಶ ಗಾಣಿಗೇರ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಹೇಶ ಅಂಗಡಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರವಿ ಮೂಖಿ, ಅಶೋಕ ಶೆಟ್ಟರ, ರವಿ ಹಳ್ಳೂರ, ವಿವೇಕಾನಂದ ಗರಸಂಗಿ, ಸಂತೋಷ ದೇಶ ಪಾಂಡೆ, ಎಂ.ಜಿ.ಧಾರವಾಡ, ಆಯ್.ಎಲ್ .ನಾಲತವಾಡ, ಎಸ್.ಎಂ.ಇನಾಮದಾರ, ವಿಠಲ ಮೂಲಿಮನಿ, ಶಿವರಾಯ ಈಶ್ವರಪ್ಪಗೋಳ, ಚನ್ನಬಸಪ್ಪ ಚಲ ವಾದಿ, ವಿರುಪಾಕ್ಷಯ್ಯ ಹಿರೇ ಮಠ, ಆರ್.ಎಸ್.ಸರಕಾವಸ, ಶಂಕರ ಹೂಗಾರ, ಆರೀಪ್ ಪೆಂಡಾರಿ ಅವರುಗಳು ಅಧಿಕಾರ ಸ್ವೀಕರಿಸಿದರು.