ಅಮೀನಗಡ ಗ್ರಾಮದೇವತೆ ಜಾತ್ರೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಕರದಂಟು ಖ್ಯಾತಿಯ ಅಮೀನಗಡದಲ್ಲಿ ಗ್ರಾಮದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಅಂತರ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಷಿಯೇಶನ್ ಕಾರ್ಯದರ್ಶಿ ಮಹಾಂತೇಶ ಮುಕ್ಕನವರ ಹೇಳಿದರು.
ನವನಗರದ ಪತ್ರಿಕಾಭನದಲ್ಲಿ ಕಬಡ್ಡಿ ಆಯೋಜಿಸಿರುವ ಕುರಿತು ಮಾತನಾಡಿದ ಅವರು ಮೇ ೯ ರಿಂದ ೧೧ ರ ವರೆಗೆ ಮೂರು ದಿನ ಪಂದ್ಯಾವಳಿಗಳು ಅಮೀನಗಡ ಪಟ್ಟಣದ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಸ್ಥಳೀಯ ಭುವನೇಶ್ವರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದಿಂದ ಯಾವುದೇ ಪಂದ್ಯಾವಳಿಗಳು ನಡೆದಿರಲಿಲ್ಲ. ಈ ವರ್ಷ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕಬಡ್ಡಿ ಪಂದ್ಯ ಆಯೋಜಿಸಲಾಗಿದೆ. ರಾಜ್ಯ ಹಾಗೂ ಮಹಾರಾಷ್ಟç ರಾಜ್ಯಗಳಿಂದ ತಂಡಗಳು ಆಗಮಿಸಲಿದ್ದು, ಕ್ರೀಡಾಪಟುಗಳಿಗೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಂತೋಷ ಬಿದರಿ ಮಾತನಾಡಿ, ಪಂದ್ಯಾವಳಿಯಲ್ಲಿ ಉಚಿತವಾಗಿ ತಂಡಗಳ ಭಾಗವಹಿಸುವಿಕೆ ಇರಲಿದೆ. ಪಂದ್ಯದ ಯಶಸ್ಸಿಗೆ ನಾನಾ ಸಮಿತಿಗಳನ್ನು ರಚಿಸಲಾಗಿದೆ. ಪ್ರಥಮ ಬಹುಮಾನ ೭೫ ಸಾವಿರ ರೂ., ದ್ವಿತೀಯ ಬಹುಮಾನ ೫೦ ಸಾವಿರ ರೂ., ತೃತೀಯ ಬಹುಮಾನ ೩೫ ಸಾವಿರ ಹಾಗೂ ೩೦ ಸಾವಿರ ಚತುರ್ಥ ಬಹುಮಾನ ಹಾಗೂ ಟ್ರೋಫಿ ಒಳಗೊಂಡಿದೆ ಎಂದರು.
ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಇಂತಹ ಪಂದ್ಯಾವಳಿಗಳು ಅವಶ್ಯಕವಾಗಿದೆ. ಈಗಾಗಲೇ ಪಂದ್ಯಾವಳಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಬೇರೆ ಊರುಗಳಿಂದ ಬರುವ ಪ್ರೇಕ್ಷಕರಿಗೆ ಊಟ ಹಾಗೂ ವಸತಿ ವ್ಯವಸ್ಥೆಯಿದೆ. ೧೬ ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ ಎಂದು ತಿಳಿಸಿದರು.
ರವಿ ಅನವಾಲ, ಯಮನೂರ ಕತ್ತಿ, ಎಸ್.ಎಂ.ಬಾರಡ್ಡಿ ಇತರರು ಇದ್ದರು.