ಗಣಿಗಾರಿಕೆಯ ಸುಸ್ಥಿರತೆ ಹಾಗೂ ತ್ಯಾಜ್ಯ ನಿರ್ವಹಣೆ
ನಿಮ್ಮ ಸುದ್ದಿ ಬಾಗಲಕೋಟೆ
ಗಣಿಗಾರಿಕೆಯ ಸುಸ್ಥಿರತೆ ಹಾಗೂ ತ್ಯಾಜ್ಯ ನಿರ್ವಹಣೆ ಎಂಬ ವಿಷಯದ ಕುರಿತು ಮೇ ೮ ರಂದು ಬಾಗಲಕೋಟೆಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಡಿ.ಬಿ.ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿಯ ಡಿ.ಬಿ.ಮೈನ್ಸ್ನಲ್ಲಿ ವಿಚಾರ ಸಂಕಿರಣದ ಕುರಿತು ಮಾಹಿತಿ ನೀಡಿದ ಅವರು, ಬಾಗಲಕೋಟೆಯ ಬವಿವ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಮೈನಿಂಗ್ ಎಂಜಿನಿಯರ್ಸ್ ಅಸೋಷಿಯೇಷನ್ ಆಪ್ ಇಂಡಿಯಾದ ಬೆಳಗಾವಿ ಚಾಪ್ಟರ್ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಂಗಳೂರಿನ ಎನ್‌ಐಟಿಕೆಯ ನಿರ್ದೇಶಕ ಪ್ರೊ.ಉದಯಕುಮಾರ ಯರಗಟ್ಟಿ ಉದ್ಘಾಟಿಸಲಿದ್ದು, ಮೈನಿಂಗ್ ಎಂಜಿನೀಯರ್ಸ್ ಅಸೋಸಿಯೇಷನ್ ಆಪ್ ಇಂಡಿಯಾದ ಅಧ್ಯಕ್ಷ ಕೆ.ಮಧುಸೂಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜ್ ಪ್ರಾಚಾರ್ಯ ಡಾ.ಎಸ್.ಎ.ಭೂಸನೂರಮಠ, ಡಿ.ಬಿ.ಮೈನ್ಸ್ ಉಪಾಧ್ಯಕ್ಷ ರಾಚಪ್ಪ ಸರಡಗಿ, ಕಾಲೇಜ್‌ನ ಐಕ್ಯೂಎಸಿ ಘಟಕದ ಸಂಯೋಜಕ ಡಾ.ಎಸ್.ಎಂ.ಗಾಂವಕರ, ಎಂಐಎಐ ಬೆಳಗಾವಿ ಚಾಪ್ಟರ್‌ನ ಕಾರ್ಯದರ್ಶಿ ಅಮೀತ್ ಘೂಳಿ, ಕಾರ್ಯಾಧ್ಯಕ್ಷ ಡಾ.ಪುರಂದರ ಬೇಕಲ್ ಇತರರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಮೈನಿಂಗ್‌ನಲ್ಲಿನ ತ್ಯಾಜ್ಯ ಉಪಯೋಗಿಸಿಕೊಂಡು ಪರಿಸರ ಸಂರಕ್ಷಣೆ, ಜನತೆಗೆ ಉದ್ಯೋಗ ನೀಡುವಿಕೆಯತ್ತ ಗಮನ ಹರಿಸಲಾಗುವುದು. ಗಣಿಗಾರಿಕೆ ಒಂದು ಬೃಹತ್ ಉದ್ಯಮವಾಗಿದ್ದು ಈ ಉದ್ಯಮವನ್ನು ಯಾವುದೇ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಸಮಾಜ ಹಾಗೂ ಸುತ್ತಮುತ್ತಲಿನ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ನೋಡಿಕೊಳ್ಳುವುದು ಆ ಮೂಲಕ ದೇಶದ ಆರ್ಥಿಕ ಸುಸ್ಥಿರತೆಗೆ ಬೆಂಗಾವಲಾಗುವುದು ಗಣಿ ಉದ್ಯಮಿದಾರರ ಬಹು ಮುಖ್ಯ ಜವಾಬ್ದಾರಿಯಾಗಿದೆ. ಗಣಿಗಾರಿಕೆಯಿಂದ ಹೊರಬರುವ ತ್ಯಾಜ್ಯವನ್ನು ಪುನರ್ ಬಳಕೆ ಮಾಡುವಲ್ಲಿ ಉದ್ಯಮಿದಾರರ ಮತ್ತು ಉದ್ದಿಮೆಯ ಪ್ರಗತಿ ಅಡಗಿದ್ದು ಈ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವಿಚಾರ ಸಂಕಿರಣ ಹೊಸ ಬೆಳಕು ತರಲಿದೆ ಎಂದರು.
ಪ್ರಾಚಾರ್ಯ ಎಸ್.ಎ.ಭೂಸನೂರಮಠ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ೧೫ ಜನ ಸಂಪನ್ಮೂಲ ವ್ಯಕ್ತಿಗಳು ಪ್ರಬಂಧ ಮಂಡಲಿದ್ದು ದೇಶದ ನಾನಾ ಭಾಗಗಳಿಂದ ಪ್ರತಿನಿಧಿಗಳು, ಕಾಲೇಜ್ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿ.ಬಿ.ಮೈನ್ಸ್ನ ಜ್ಯೋತಿ ಸರಡಗಿ, ಅಮೀತ್ ಘೂಳಿ, ಸಾಯಿ ಕಿರಣ, ಸೀತಾರಾಮ ಮೂರ್ತಿ, ಹುಸೇನ್ ನದಾಫ್ ಇತರರು ಇದ್ದರು.