This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಅತಿವೃಷ್ಠಿಯಿಂದಾದ ಹಾನಿ ಪರಿಹಾರಕ್ಕೆ ತುರ್ತು ಕ್ರಮ : ಸುನೀಲ್‍ಕುಮಾರ

*ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ | ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವು*

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ 1 ರಿಂದ 5 ವರೆಗೆ ವಾಡಿಕೆಗಿಂತ ಪ್ರತಿಶತ ಶೇ.122.3 ರಷ್ಟು ಹೆಚ್ಚಿಗೆ ಮಳೆಯಾಗಿದ್ದು, ಇದರಿಂದಾಗಿ ಹಾನಿಗೊಳಗಾದ ಮನೆ, ಬೆಳೆ ಸಮೀಕ್ಷೆ ಕೈಗೊಂಡು ತುರ್ತಾಗಿ ಪರಿಹಾರ ಒದಗಿಸುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅತಿವೃಷ್ಠಿಯಿಂದಾದ ಹಾನಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೆ.5 ರಂದು ಇಲಕಲ್ಲ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಓರ್ವ ವ್ಯಕ್ತಿ ಸಿಡಿಲು ಬಡಿದು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ವಾಡಿಕೆ 2 ಎಂ.ಎಂ ಮಳೆಗೆ 7 ಎಂ.ಎಂ ಅಂದರೆ ಶೇ.187 ರಷ್ಟು ಹೆಚ್ಚಿಗೆ ಮಳೆಯಾಗಿರುತ್ತದೆ. ಆಯಾ ತಾಲೂಕಿನ ತಹಶೀಲ್ದಾರರು ಮಳೆಯಿಂದಾದ ಹಾನಿಯ ಜಂಟಿ ಸಮೀಕ್ಷೆ ಕೈಗೊಂಡು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲು ಕ್ರಮಕೈಗೊಳ್ಳಲು ಸೂಚಿಸಿದರು.

ತಹಶೀಲ್ದಾರರು ತಮ್ಮ ವ್ಯಾಪ್ತಿಗೆ ಒಳಪಡುವ ವಿವಿಧ ಜಲಾಶಯಗಳ ಒಳ ಹಾಗೂ ಹೊರ ಹರಿವಿನ ಮಾಹಿತಿಯನ್ನು ಪ್ರತಿದಿನ ಪಡೆಯಬೇಕು. ಮನೆಗಳಿಗೆ ನೀರು ನುಗ್ಗಿದಲ್ಲಿ ಅವರನ್ನು ಬೆರೆಡೆ ಸ್ಥಳಾತರಿಸುವ ಮೂಲಕ ಪರಿಹಾರ ನೀಡಲು ತಕ್ಷಣ ಕ್ರಮವಹಿಸಬೇಕು. ಹಾನಿಯ ಬಗ್ಗೆ ಸಮೀಕ್ಷೆ ಕೈಗೊಂಡಾಗ ಮಾತ್ರ ಅಂತಿಮ ಹಾನಿಯ ಮಾಹಿತಿ ದೊರೆಯಲಿದೆ. ಇದರಿಂದ ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡಲು ಸಾಧ್ಯವಾಗುತ್ತದೆ. ಪರಿಹಾರ ನೀಡುವಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು ಎಂದರು.

ಕಳೆದ ಸೆ.5 ರಂದು ಸುರಿದ ಮಳೆಯಿಂದಾಗಿ ಬಾದಾಮಿ ಪಟ್ಟಣದಲ್ಲಿ ಕಾಲುವೆ ನೀರಿನಿಂದ ಆಶ್ರಯ ಕಾಲೋನಿಯಲ್ಲಿ ಸುಮಾರು 225 ಮನೆಳಿಗೆ ಹಾಗೂ ಅಗಸ್ಥ್ಯತೀರ್ಥ ಹೊಂಡ ಒಡೆದು ಹೊಂಡದ ಸಮೀಪ ಇರುವ 25 ಮನೆಗಳಿಗೆ ನೀರು ನುಗ್ಗಿ ಗೃಹೊಪಯೋಗಿ ವಸ್ತುಗಳು ಹಾಗೂ ಬಟ್ಟೆ, ಬರೆ ಹಾನಿಯಾಗಿದ್ದು, ಹಾನಿಗೊಳಗಾದ ಕುಟುಂಬಕ್ಕೆ 10 ಸಾವಿರ ರೂ. ಪಾವತಿಗೆ ಇಂದೇ ಕ್ರಮಕೈಗೊಳ್ಳಲು ಬಾದಾಮಿ ತಹಶೀಲ್ದಾರರಿಗೆ ಸೂಚಿಸಿದರು. ನರೇನೂರ ಗ್ರಾಮದಲ್ಲಿ ಮನೆ ಕುಸಿತದಿಂದ ಆಕಳ ಕರು ಹಾನಿಗೊಳಗಾಗಿದ್ದು, ಪರಿಹಾರಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದರು.

ಸೆ.5 ರಂದು ಸುರಿದ ಮಳೆಗೆ ಬಾದಾಮಿ ತಾಲೂಕಿನಲ್ಲಿ 57, ಬಾಗಲಕೋಟೆ 26, ಬೀಳಗಿ 20, ಜಮಖಂಡಿ 2, ಮುಧೋಳ 12, ಗುಳೇದಗುಡ್ಡ 5, ಇಲಕಲ್ಲ 8, ರಬಕವಿ-ಬನಹಟ್ಟಿ 25 ಸೇರಿ ಒಟ್ಟು 155 ಮನೆಗಳು ಹಾನಿಯಾಗಿವೆ. ಕೃಷಿಬೆಳೆಯಲ್ಲಿ ಉದ್ದು, ಹೆಸರು, ಗೋವಿನಜೋಳ, ಸೂರ್ಯಕಾಂತಿ, ತೊಗರಿ, ಸೋಯಾಬಿನ್, ಹತ್ತಿ ಮತ್ತು ಕಬ್ಬು ಬೆಳೆ ಸೇರಿ ಒಟ್ಟು 9819 ಹೆಕ್ಟೇರ್, ತೋಟಗಾರಿಕೆ ಬೆಳೆಯಲ್ಲಿ ಪ್ರಮುಖವಾಗಿ ಈರುಳ್ಳಿ ಬೆಳೆ 3823 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಹಾನಿಯ ಜಂಟಿ ಸಮೀಕ್ಷೆ ಕೈಗೊಂಡು ಪರಿಹಾರ ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು.

ಅಲ್ಲದೇ ಈ ಹಿಂದೆ ಸುರಿದ ಮಳೆಯಿಂದ ಉಂಟಾದ ಹಾನಿಯ ಸಮೀಕ್ಷೆ ಮುಗಿದಿದ್ದು, ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡುವ ಕಾರ್ಯದಲ್ಲಿ ವಿಳಂಬವಾಗಿದ್ದು, ಎರಡು ದಿನಗಳಲ್ಲಿ ಎಂಟ್ರಿ ಕಾರ್ಯ ಪೂರ್ಣಗೊಳ್ಳಬೇಕು. ಬಾದಾಮಿ ಮತ್ತು ಬಾಗಲಕೋಟೆ ತಾಲೂಕಿನ ಡಾಟಾ ಎಂಟ್ರಿ ಬಾಕಿ ಹೆಚ್ಚಿಗೆ ಇದ್ದು, ತಹಶೀಲ್ದಾರರು ಕ್ರಮಕೈಗೊಳ್ಳಲು ತಿಳಿಸಿದರು. ಇದೇ ಸಂದರ್ಭದಲ್ಲಿ ನಿಧನರಾದ ಸಚಿವ ಉಮೇಶ ಕತ್ತಿ ಅವರಿಗೆ ಸಂತಾಪ ಸೂಚಿಸಲು ಎರಡು ನಿಮಿಷ ಮೌನ ಆಚರಿಸಲಾಯಿತು.

ಸಭೆಯಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಭೂದಾಖಲೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುಳಗುಂದ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.

 

Nimma Suddi
";