ಯುವ ಮತದಾರರ ನೋಂದಣಿಗೆ ಅರಿವು : ಪಿ.ಎಸ್.ವಸ್ತ್ರದ
ನಿಮ್ಮ ಸುದ್ದಿ ಬಾಗಲಕೋಟೆ
ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ ಭಾರತ ಚುನಾವಣಾ ಆಯೋಗವು ವರ್ಷಕ್ಕೆ ನಾಲ್ಕು ಭಾರಿ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಯುವ ಮತದಾರರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಗುರುವಾರ ಮತದಾರರ ನೋಂದಣಿ ಕುರಿತು ಸ್ವೀಪ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನವರಿ 1, ಏಪ್ರೀಲ್ 1, ಜುಲೈ 1 ಹಾಗೂ ಅಕ್ಟೋಬರ 1ಕ್ಕೆ 18 ವರ್ಷ ಪೂರೈಸುವ ಯುವ ಮತದಾರರು ನಮೂನೆ 6ನ್ನು ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಈ ಹಿಂದ ಹೆಸರು ಸೇರ್ಪಡೆಗೆ ವರ್ಷಕ್ಕೆ ಒಂದು ಬಾರಿ ಅವಕಾಶ ಕಲ್ಪಿಸಲಾಗಿತ್ತು. ಈಗ ವರ್ಷಕ್ಕೆ 4 ಬಾರಿ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಸ್ವೀಪ್ ಚಟುವಟಿಕೆಗಳಲ್ಲಿ ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಮತದಾರರ ಗುರುತಿನ ಕಾರ್ಡಗೆ ಆಧಾರ ಸಂಖ್ಯೆ ಜೋಡಣೆ, ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಚುನಾವಣಾ ಜಾಗೃತಿ ಕ್ಲಬ್, ಪ್ರತಿ ಇಲಾಖೆಯಿಂದ ಸ್ವೀಪ್ ಸಮಿತಿ ರಚನೆ ಮಾಡಬೇಕು. ಸ್ಥಳೀಯವಾಗಿ ನಾಟಕದ, ಮೂಗರಿಗೆ ಅವರ ಭಾಷೆಯಲ್ಲಿ ಸಂಭಾಷಣೆ, ಆಡಿಯೋ, ವಿಡಿಯೋ ಮೂಲಕ ಜಾಗೃತಿ ಮೂಡಿಸಲು ಕ್ರಮವಹಿಸಲು ತಿಳಿಸಿದರು.
ಮತದಾರರ ಪಟ್ಟಿ ಶುದ್ದೀಕರಣಕ್ಕೆ ಭಾರತ ಚುನಾವಣಾ ಆಯೋಗ ಸಾಕಷ್ಟು ಸುಧಾರಣೆಗಳು ತಂದಿದೆ. ಮತದಾರರ ಕಾರ್ಡಗೆ ಆಧಾರ ಜೋಡನೆ ಕಾರ್ಯ ನಡೆದಿದ್ದು, ಮೊದಲು ತಮ್ಮ ತಮ್ಮ ಇಲಾಖೆಯಲ್ಲಿನ ಸಿಬ್ಬಂದಿಗಳು ಆಧಾರ ಜೋಡನೆಗೆ ಮಾಡಿದ ಬಗ್ಗೆ ಪರಿಶೀಲಿಸಬೇಕು. ಜಿಲ್ಲೆಯಲ್ಲಿ 10,43,876 ಮತದಾರರ ಕಾರ್ಡಗೆ ಆಧಾರ ಲಿಂಕ್ ಮಾಡಲಾಗಿ ಶೇ.68.98 ರಷ್ಟು ಪ್ರಗತಿಯಾಗಿದ್ದು, ನೂರಕ್ಕೆ ನೂರರಷ್ಟು ಆಧಾರ ಲಿಂಕ ಆಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಕುರಿತ ಜಾಗೃತಿ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಚುನಾವಣಾ ತಹಶೀಲ್ದಾರ, ನಾಯ್ಕಲಮಠ, ಡಿವಾಯ್‍ಪಿಸಿಯ ಉಪ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಬಿ.ಜಿ.ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.