ನಿಮ್ಮ ಸುದ್ದಿ ಬಾಗಲಕೋಟೆ
ಲೋಕಾಯುಕ್ತ ಸಂಸ್ಥೆ ಬಲಪಡಿಸಲು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಮಾಡಿರುವ ಶಿಫಾರಸ್ಸುಗಳನ್ನು ಸರಕಾರ ಜಾರಿಗೊಳಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ಸ್ಥಾಪಿಸಿದ ಸಿದ್ದರಾಮಯ್ಯ ಸರಕಾರದ ನಿರ್ಧಾರವನ್ನು ಕಿತ್ತು ಹಾಕಿ ಲೋಕಾಯುಕ್ತಕ್ಕೆ ಹೈಕೋರ್ಟ್ ಬಲ ನೀಡಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಕೈಗೊಂಡ ಕ್ರಮದಿಂದ ಎಲ್ಲ ಅಧಿಕಾರ ಸಿಎಂ ಕೇಂದ್ರೀಕೃತವಾಗಿತ್ತು. ಸಿದ್ದರಾಮಯ್ಯ ಭ್ರಷ್ಟಾಚಾರದ ಕಿಂಗ್ ಆಗಿದ್ದರೆ, ನಂತರ ಬಂದ ಬಿಜೆಪಿ ಸರಕಾರವೂ ಲೋಕಾಯುಕ್ತ ಬಲಪಡಿಸಲಿಲ್ಲ. ಅಧಿಕಾರ ಪಡೆದ ೨೪ ಗಂಟೆಯೊಳಗೆ ಲೋಕಾಯುಕ್ತಕ್ಕೆ ಬಲ ತುಂಬುವುದಾಗಿ ಹೇಳಿದ್ದ ಬಿಜೆಪಿ ಸರಕಾರ ಮಾತಿಗೆ ತಪ್ಪಿತು. ನಾವು ನಡೆಸಿದ ಸುದೀರ್ಘ ಹೋರಾಟ ಪರಿಣಾಮ ಇದೀಗ ಲೋಕಾಯುಕ್ತಕ್ಕೆ ಬಲ ಬಂದಿದೆ’ ಎಂದು ಹೇಳಿದರು.
ಲೋಕಾಯುಕ್ತ ಸಂಸ್ಥೆಗೆ ಶಕ್ತಿ ನೀಡಲು ಹೈಕೋರ್ಟ್ ಕೆಲ ಶಿಫಾರಸ್ಸು ಮಾಡಿದೆ. ಜತೆಗೆ ನಿವೃತ್ತ ಲೋಕಾಯುಕ್ತ ಹೆಗ್ಡೆ ಅವರು ಲೋಕಾಯುಕ್ತರ ಶಿಫಾರಸ್ಸುಗಳ ಕಡ್ಡಾಯ ಅಳವಡಿಕೆ, ಸಮರ್ಥ ಅಧಿಕಾರಿಗಳ ನಿಯೋಜನೆ, ವರ್ಗಾವಣೆಗೆ ಲೋಕಾಯುಕ್ತರ ಅನುಮತಿ, ಮೂರು ವರ್ಷ ಅಕಾರಿಗಳ ವರ್ಗಾವಣೆಗೆ ತಡೆ, ನಿಗದಿತ ಅವಯಲ್ಲಿ ತನಿಖೆ ಪೂರ್ಣಗೊಳಿಸುವಂತೆ ಅಕಾರ ನೀಡಲು ಶಿಫಾರಸ್ಸು ಮಾಡಿದ್ದಾರೆ. ಸರಕಾರ ಈ ಶಿಫಾರಸ್ಸು ಪರಿಗಣಿಸಿ ಜಾರಿಗೊಳಿಸಬೇಕು ಎಂದರು.
ರಾಜ್ಯ ಸರಕಾರ ಜಾರಿಗೊಳಿಸಿರುವ ಮೂರು ಕರಾಳ ಕೃಷಿ ಕಾಯ್ದೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ನಡೆಸಿದ ಜನಜಾಗೃತಿ ರ‍್ಯಾಲಿ ಯಶಸ್ವಿಯಾಗಿದೆ. ಮುಂದಿನ ಹಂತದ ಹೋರಾಟಕ್ಕಾಗಿ ಸೆ.೨೪ ರಂದು ತುಮಕೂರು, ೨೫ ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುತ್ತಿದೆ. ನ.೨೪ ರಿಂದ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಜಾಥಾ ನಡೆಸಲಾಗುತ್ತದೆ. ಡಿ.೫ ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಲಾಗುತ್ತದೆ ಎಂದು ವಿವರಿಸಿದರು.
ಅರ್ಕಾವತಿ ಹಗರಣದಂತಹ ಅಕ್ರಮಗಳ ಬಗ್ಗೆ ಇಡೀ ಸಮಾಜವೇ ಹೋರಾಟ ನಡೆಸಬೇಕು. ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಇಬ್ಬರು ಹೋರಾಟಗಾರರು ಅರ್ಜಿ ಸಲ್ಲಿಸಿ ನಂತರ ವಾಪಸ್ ಪಡೆದಿದ್ದಾರೆ. ಕೊತ್ವಾಲ್ ರಾಮಚಂದ್ರನ ಸಹವರ್ತಿಯಾದವರು ಮಾಡಿದ್ದೇನು ಎಂಬುದು ಗೊತ್ತಿದೆ. ನಾವು ನಡೆಸಿದ ಹೋರಾಟಕ್ಕೆ ಸದ್ಯ ಇಡಿ ಇಲಾಖೆ ಕಣ್ಣು ತೆರೆದಿದೆ. ಸರಕಾರದ ವಿರುದ್ಧ ಶೇ.೪೦ರ ಕಮಿಷನ್ ಆರೋಪ ಕೇಳಿಬಂದಿದೆ. ಪ್ರಧಾನಿ ಕೂಡ ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ. ಲಂಚ ತೆಗೆದುಕೊಳ್ಳುವವರು ಅಷ್ಟೇ ಅಲ್ಲ, ಲಂಚ ನೀಡುವವರಿಗೂ ಶಿಕ್ಷೆ ಆಗಬೇಕು ಎಂದರು