ವಿಕಲಚೇತನರಿಗೆ ಮೀಸಲಿಟ್ಟ ಅನುದಾನ ಸದ್ಬಳಕೆಯಾಗಲಿ : ಸುನೀಲ್‍ಕುಮಾರ
ನಿಮ್ಮ ಸುದ್ದಿ ಬಾಗಲಕೋಟೆ
ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಮೀಸಲಿರಿಸಲಾದ ಶೇ.5 ರಷ್ಟು ಅನುದಾನ ಸದ್ಬಳಕೆಯಾಗಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಆಗಸ್ಟ-22 ಮಾಹೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಕಲಚೇತನರಿಗೆ ಮೀಸಲಿರಿಸಲಾದ ಅನುದಾನದಲ್ಲಿ ಕೇವಲ ದ್ವಿಚಕ್ರ ವಾಹನ ಕೊಡದೇ ಕಿವುಡ, ಮೂಕರಿಗೆ ಸಲಕರಣೆಗಳನ್ನು ಕೊಡುವ ಕೆಲಸವಾಗಬೇಕು. ಅಲ್ಲದೇ ಇಲಾಖೆಯ ಇತರೆ ಯೋಜನೆಗಳ ಸೌಲಭ್ಯಗಳನ್ನು ಸಹ ವಿಕಲಚೇತನರಿಗೆ ಒದಗಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳಡಿ ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು ಆನ್‍ಲೈನ್‍ನಲ್ಲಿ ಕಡ್ಡಾಯವಾಗಿ ಅಪಲೋಡ್ ಆಗಬೇಕು. ಅಪಲೋಡ್ ಮಾಡಲು ಸಮಸ್ಯೆ ಇದ್ದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಂಪರ್ಕಿಸಿ ಅಪಲೋಡ್ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನ ಸಂಪೂರ್ಣ ಹಣ ವಿನಿಯೋಗವಾಗಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯವರು ಇತರೆ ಇಲಾಖೆಗಳೊಂದಿಗೆ ಸಹಕಾರ ಪಡೆದುಕೊಂಡು ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಇಲಾಖೆಯ ಪಾತ್ರ ಮಹತ್ವದ್ದಾಗಿದ್ದು, ಅನುಷ್ಠಾನದಲ್ಲಿ ಸಂಪೂರ್ಣ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯದಾಗಿದೆ. ಇಲಾಖೆಯಿಂದ ನಿರ್ವಹಣೆ ಕಾರ್ಯವಾಗಬೇಕು. ಪ್ರತಿಯೊಂದು ವಿಷಯಗಳನ್ನು ಸಭೆಯಲ್ಲಿ ಇಡಬಾರದು. ತಮ್ಮ ಹಂತದಲ್ಲಿಯೇ ಕೆಲಸ ಕಾರ್ಯಗಳಾಗಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಂದಾ ಹನಮರಟ್ಟಿ ಅವರು ವಿವಿಧ ಇಲಾಖೆಯ ಪ್ರಗತಿ ವರದಿಯಲ್ಲಿ ಸಭೆಗೆ ತಿಳಿಸಿದರು. ಏಪ್ರೀಲ್‍ದಿಂದ ಆಗಸ್ಟ ಮಾಹೆಯವರೆಗೆ ವಿಶೇಷ ಘಟಕ ಯೋಜನೆಯಡಿ ಬಿಡುಗಡೆಯಾದ 4512.70 ಲಕ್ಷ ರೂ.ಗಳ ಪೈಕಿ 2315.26 ಲಕ್ಷ ರೂ.ಗಳ ಖರ್ಚು ಮಾಡುವ ಮೂಲಕ ಶೇ.51.31 ರಷ್ಟು ಪ್ರಗತಿ ಸಾಧಿಸಿದರೆ, ಗಿರಿಜನ ಉಪಯೋಜನೆಯಡಿ ಬಿಡುಗಡೆಯಾದ 3084.86 ಲಕ್ಷ ರೂ.ಗಳ ಪೈಕಿ 765.30 ಲಕ್ಷ ರೂ.ಗಳ ಖರ್ಚು ಮಾಡಿ ಶೇ.24.81 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಆಹಾರ ಇಲಾಖೆಯ ಉಪನಿರ್ದೇಶಕ ಚನಬಸಪ್ಪ ಕೊಡ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ವಾ.ಕ.ರ.ಸಾ.ಸಂಸ್ಥೆಯ ಸಾರಿಗೆ ನಿಯಂತ್ರಕ ಮೈತ್ರಿ, ಪಶುಪಾನಾ ಇಲಾಖೆಯ ಉಪನಿರ್ದೇಶಕ ಡಾ.ಶಶೀಧರ ನಾಡಗೌಡರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.