3ನೇ ಯುನಿಟ್ ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿಯೇ ಸಿಎಂ ಚಾಲನೆ
ನಿಮ್ಮ ಸುದ್ದಿ ಬಾಗಲಕೋಟೆ
ಯುನಿಟ್-3ರ ಅಭಿವೃದ್ದಿಗೆ ಸರಕಾರ 3000 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಅಭಿವೃದ್ದಿ ಕಾರ್ಯಕ್ಕೆ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸಭಾಭವನದಲ್ಲಿ ಸೋಮವಾರ ಯುನಿಟ್-1 ಹಾಗೂ 2ರಲ್ಲಿ ಮುಖ್ಯ ಸಂತ್ರಸ್ಥರಿಗೆ ಹಾಗೂ ಇತರೆ ಸಂತ್ರಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಮುಳುಗಡೆ ಸಂತ್ರಸ್ತರಿಗೆ ನಿವೇಶನ ನೀಡುವ ಸಲುವಾಗಿ ಯುನಿಟ್-3ರ ಅಭಿವೃದ್ದಿಗೆ ಸರಕಾರ ಅನುಮೋದನೆ ನೀಡಿದ್ದು, ದೀಪಾವಳಿ ಹಬ್ಬ ಮುಗಿದ ಮೇಲೆ ಬೆಳಿಗ್ಗೆ ಬಾಗಲಕೋಟೆ ಮಧ್ಯಾಹ್ನ ಜಮಖಂಡಿಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆಂದು ತಿಳಿಸಿದರು. ಸಿವಿಲ್ ಮತ್ತು ಎಲೇಕ್ಟ್ರೀಕಲ್ ಕಾಮಗಾರಿ ಬೇರೆ ಬೇರೆ ಮಾಡಲಾಗುತ್ತಿದ್ದು, 50 ಸಾವಿರ ಎಕರೆ ನೀರಾವರಿ, ರಸ್ತೆ ಹಾಗೂ ಯುನಿಟ್-3ರ ಅಭಿವೃದ್ದಿಗೆ ಚಾಲನೆ ನೀಡಲಿದ್ದಾರೆ ಎಂದರು.
ನಗರದ ಕಿಲ್ಲಾ ನಡೆಗಡ್ಡೆ ಪ್ರದೇಶದಲ್ಲಿನ 856 ರಿಂದ 1100 ಜನರ ಸಂತ್ರಸ್ಥರ ಸರ್ವೆಕಾರ್ಯ ನಡೆಸಿ ಪರಿಹಾರ ಹಾಗೂ ನಿವೇಶನ ಕೊಡುವ ಕಾರ್ಯಕ್ಕೂ ಸಹ ಚಾಲನೆ ನೀಡಲಾಗುತ್ತಿದೆ. ಯುನಿಟ್-1 ಹಾಗೂ 2ರಲ್ಲಿ 5 ಜನ ಬಾಡಿಗೆದಾರರಿಗೆ, 24 ಮುಖ್ಯ ಸಂತ್ರಸ್ಥರು, 50 ಮುಖ್ಯ ಸಂತ್ರಸ್ಥರ ವಯಸ್ಕರ ಮಕ್ಕಳು, 5 ಅತೀಕ್ರಮಣದಾರರು ಹಾಗೂ 12 ವಾಣಿಜ್ಯ ಸಂತ್ರಸ್ಥರು ಸೇರಿ ಒಟ್ಟು 96 ಜನರಿಗೆ ಹಕ್ಕುಪತ್ರಗಳನ್ನು ಇಂದು ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 2128 ನಿವೇಶನ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಹಕ್ಕು ಪತ್ರ ಪಡೆದುಕೊಂಡವರು ಒಂದು ವರ್ಷದಲ್ಲಿ ಮನೆ ಕಟ್ಟಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಿವೇಶನ ಮುಟ್ಟುಗೋಲು ಹಾಕಿಕೊಳ್ಳಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ಮೋಹನ ನಾಡಗೌಡ, ಶಿವಾನಂದ ಟವಳಿ, ಜಿ.ಜಿ.ಯಳ್ಳಿಗುತ್ತಿ, ಪ್ರಕಾಶ ತಪಶೆಟ್ಟಿ, ಪುನರ್ವಸತಿ ಪುನರ್ ನಿರ್ಮಾಣದ ಅಧಿಕಾರಿ ಗಣಪತಿ ಪಾಟೀಲ, ಬಿಟಿಡಿಎ ಮುಖ್ಯ ಇಂಜಿನೀಯರ್ ಮನ್ಮಥಯ್ಯ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.