ನವದೆಹಲಿ: ಸುಪ್ರೀಂ ಕೋರ್ಟ್ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನಾಳೆ (ಸೋಮವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಪೆಗಾಸಸ್ ಪ್ರೈವೇರ್ ಪ್ರಕರಣ ಸೇರಿದಂತೆ ಹಲವು ಮಹತ್ವದ ತೀರ್ಪುಗಳು ಮತ್ತು ಆದೇಶಗಳ ಭಾಗವಾಗಿದ್ದಾರೆ. ಇಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನಿವೃತ್ತರಾಗಲಿದ್ದಾರೆ. ಅವರ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್ ಅವರನ್ನು ನೇಮಕ ಮಾಡುವಂತೆ ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ನ್ಯಾಯಮೂರ್ತಿ ಕಾಂತ್ ಅವರನ್ನು ಮುಂದಿನ ಸಿಜೆಐ ಆಗಿ ಅಕ್ಟೋಬರ್ 30 ರಂದು ನೇಮಕ ಮಾಡಲಾಯಿತು. ಸುಪ್ರೀಂ ಕೋರ್ಟ್ನ ನ್ಯಾಯ ಮೂರ್ತಿಯಾಗಿ ನ್ಯಾ. ಸೂರ್ಯಕಾಂತ್ ಅವರು 2019ರ ಮೇ 24ರಂದು ಬಡ್ತಿ ಪಡೆದಿದ್ದರು. ಇವರು 2027ರ ಫೆ. 9ರಂದು ನಿವೃತ್ತಿಯಾಗಲಿದ್ದಾರೆ. ಇವರು ಸುಮಾರು 15 ತಿಂಗಳವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಆರಂಭಿಕ ಜೀವನ :
ಇವರು ಫೆಬ್ರವರಿ 10, 1962 ರಂದು ಹರಿಯಾಣದ ಹಿಸಾರ್ ಜಿಲ್ಲೆಯ ಪೆಟ್ವಾರ್ ಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. 1981 ರಲ್ಲಿ ಹಿಸಾರ್ನ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದರು.
ಕಾನೂನು ಪದವಿ (ಎಲ್ಎಲ್ಬಿ) 1984 ರಲ್ಲಿ ರೋಹ್ಟಕ್ನ ಮಹರ್ಷಿ ದಯಾನಂದ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು, ಕಾನೂನು ಸ್ನಾತಕೋತ್ತರ ಪದವಿ (ಎಲ್ಎಲ್ಎಂ): 2011 ರಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಕಾನೂನು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ವೃತ್ತಿಜೀವನದ ಆರಂಭ:
1984 ರಲ್ಲಿ ಹಿಸಾರ್ನ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಅಭ್ಯಾಸವನ್ನು ಪ್ರಾರಂಭಿಸಿದರು.
1985 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಲು ಚಂಡೀಗಢಕ್ಕೆ ಸ್ಥಳಾಂತರಗೊಂಡರು.
ವಿಶೇಷತೆ: ಅವರು ಸಂವಿಧಾನಾತ್ಮಕ, ಸೇವಾ ಮತ್ತು ಸಿವಿಲ್ ವಿಷಯಗಳಲ್ಲಿ ವಿಶೇಷ ಜ್ಞಾನವನ್ನು ಹೊಂದಿದ್ದರು.
ಅಡ್ವೊಕೇಟ್ ಜನರಲ್: 2000 ರಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡರು.
ಹಿರಿಯ ವಕೀಲ: ಮಾರ್ಚ್ 2001 ರಲ್ಲಿ ಹಿರಿಯ ವಕೀಲ ಎಂದು ಪದನಾಮ ಪಡೆದರು.
ಇವರ ಪ್ರಮುಖ ತಿರ್ಪೂಗಳು:
ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಇವುಗಳಲ್ಲಿ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ, ಪರಿಸರ ಹಾಗೂ ಲಿಂಗ ಸಮಾನತೆ ಪ್ರಕರಣಗಳು ಸೇರಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ಪೀಠದ ಭಾಗವಾಗಿದ್ದರು.
ವಸಾಹತು ಯುಗದ ದೇಶದ್ರೋಹ ಕಾನೂನಿಗೆ ತಡೆ ನೀಡಿದ್ದ ಪೀಠದಲ್ಲಿದ್ದರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಸಮಯದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾದ 65 ಲಕ್ಷ ಹೆಸರುಗಳ ವಿವರಗಳನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು.
ಒಂದು ಶ್ರೇಣಿ-ಒಂದು ಪಿಂಚಣಿ : ರಕ್ಷಣಾ ಪಡೆಗಳಿಗಾಗಿ ಜಾರಿಗೆ ತಂದ ‘ಒಂದು ಶ್ರೇಣಿ-ಒಂದು ಪಿಂಚಣಿ’ ಯೋಜನೆಯು ಸಂವಿಧಾನಾತ್ಮಕವಾಗಿ ಮಾನ್ಯವಾಗಿದೆ ಎಂದು ಎತ್ತಿಹಿಡಿದರು.
ಕೊಳಗಳ ರಕ್ಷಣೆ: ಸಾರ್ವಜನಿಕ ಬಳಕೆಗಾಗಿ ಇರುವ ಕೆರೆ-ಕೊಳಗಳು ಮತ್ತು ನೀರಿನ ಮೂಲಗಳನ್ನು ನಾಶಪಡಿಸುವ ಯೋಜನೆಗಳು ಸಂವಿಧಾನದ ಆರ್ಟಿಕಲ್ 21 ರ ಉಲ್ಲಂಘನೆಯಾಗುತ್ತವೆ ಎಂದು ತೀರ್ಪು ನೀಡಿದರು.
ಪೆಗಾಸಸ್ ಕಣ್ಗಾವಲು ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ ಪೀಠದಲ್ಲಿ ಇವರು ಇದ್ದರು. ಈ ಪ್ರಕರಣದಲ್ಲಿ, ನ್ಯಾಯಾಲಯವು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಸರ್ಕಾರಕ್ಕೆ ಮುಕ್ತ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ, ಆರೋಪಗಳ ತನಿಖೆಗಾಗಿ ಸೈಬರ್ ತಜ್ಞರ ಸಮಿತಿಯನ್ನು ನೇಮಿಸಿತು.




















