ಕೊಟ್ಟೂರು: ಕೊಟ್ಟೂರು ಮಾರ್ಗವಾಗಿ ಯಶವಂತರ – ವಿಜಯಪುರ ನಡುವೆ 2022ರಿಂದ ಸಂಚರಿಸುತ್ತಿರುವ ವಿಶೇಷ ಎಕ್ಸ್ಪ್ರೆಸ್ ರೈಲು, ಡಿ.8ರಿಂದ ಅನ್ವಯವಾಗುವಂತೆ ನಿತ್ಯ ಎಕ್ಸ್ಪ್ರೆಸ್ ರೈಲಾಗಿ ಪರಿವರ್ತನೆಯಾಗಲಿದೆ. ಈ ಕುರಿತು ಹುಬ್ಬಳ್ಳಿಯ ನೈಋುತ್ಯ ರೈಲ್ವೆ ವಲಯ ಅಧಿಕಾರಿಗಳು ಅ.13ರಂದು ಆದೇಶ ಹೊರಡಿಸಿದ್ದಾರೆ.
ಡಿ. 8ರಂದು ಯಶವಂತಪುರದಿಂದ (ರೈಲು ಗಾಡಿ ಸಂಖ್ಯೆ 16547) ಮತ್ತು ಡಿ.9ರಿಂದ ವಿಜಯಪುರದಿಂದ (ಸಂಖ್ಯೆ 16548) ನಿತ್ಯ ಎಕ್ಸ್ಪ್ರೆಸ್ ರೈಲಾಗಿ ಸಂಚಾರ ಆರಂಭಿಸಲಿವೆ. ಈವರೆಗೆ ಇದ್ದ ವಿಶೇಷ ಎಕ್ಸ್ಪ್ರೆಸ್ ಟಿಕೆಟ್ ದರದಲ್ಲಿಯೂ ಕಡಿಮೆಯಾಗಿ ಪ್ರಯಾಣಿಕರಿಗೆ ದರದ ಹೊರೆ ಕಡಿಮೆಯಾಗಲಿದೆ.
ದರದ ಹೊರೆ ಕಡಿಮೆ:
ಹಾಲಿ ಸಂಚರಿಸುತ್ತಿರುವ ವಿಶೇಷ ಎಕ್ಸ್ಪ್ರೆಸ್ ರೈಲಿನಲ್ಲಿಕೊಟ್ಟೂರಿನಿಂದ ಯಶವಂತಪುರಕ್ಕೆ ಎಸಿ ಕೋಚ್ಗೆ 1000ರೂ., ಸ್ಲೀಪರ್ ಕೋಚ್ಗೆ 380ರೂ., ಸಾಮಾನ್ಯ ಬೋಗಿಗೆ 155ರೂ. ಟಿಕೆಟ್ ದರವಿದೆ. ನಿತ್ಯ ಎಕ್ಸ್ಪ್ರೆಸ್ ಸಂಚಾರವಾಗುವುದರಿಂದ ಎಸಿ ಕೋಚ್ಗೆ 250ರೂ., ರಿಜರ್ವೇಶನ್ಗೆ 180ರೂ., ಸಾಮಾನ್ಯ ಕೋಚ್ಗೆ 50ರೂ.ಕಡಿಮೆಯಾಗಲಿದೆ. ಮೇಲ್ವರ್ಗದವರಿಗೆ ಮಾತ್ರವಲ್ಲದೇ ರಾಜಧಾನಿಗೆ ಸಂಚರಿಸುವ ಹಾಗೂ ಹೊಸಪೇಟೆ, ದಾವಣಗೆರೆ, ಹ.ಬೊ.ಹಳ್ಳಿ, ಬದಾಮಿಗೆ ತೆರಳುವ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹೊಸಪೇಟೆ -ಕೊಟ್ಟೂರು -ದಾವಣಗೆರೆ ಮಾರ್ಗದಲ್ಲಿರೈಲು ಸಂಚಾರ ಆರಂಭವಾಗಿದ್ದರೂ ದೂರದ ಪಟ್ಟಣಗಳಿಗೆ ರೈಲು ಸಂಚಾರ ಆರಂಭವಾಗಿರಲಿಲ್ಲ. ಈ ಭಾಗದ ರೈಲ್ವೆ ಹೋರಾಟ ಸಮಿತಿಯವರ ಬೇಡಿಕೆ, ಅಂದಿನ ಸಂಸದ ವೈ.ದೇವೇಂದ್ರಪ್ಪ ಶಿಫಾರಸಿನಂತೆ, ಯಶವಂತಪುರ -ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಿದ್ದರೂ ಟಿಕೆಟ್ ದರವೂ ವಿಶೇಷವಾಗಿತ್ತು. ಆರು ತಿಂಗಳ ನಂತರ ಈ ರೈಲನ್ನು ರೆಗ್ಯುಲರ್ ಮಾಡುವಂತೆ ಒತ್ತಾಯಿಸಿದ್ದಕ್ಕೆ ಇಲಾಖೆ ಇದೀಗ ಅಸ್ತು ಎಂದಿದೆ.




















