ಬೆಂಗಳೂರು; ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕುರಿತು ಆದೇಶ ಹೊರಡಿಸಿದೆ. ಈ ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟೆಚ್ಚರವಹಿಸಲು ಖಜಾನೆ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ಕೆಪಿಎಸ್ಸಿ ವತಿಯಿಂದ ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿಗಳು (RPC) ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿನಾಂಕ 19/08/2023 ಮತ್ತು 20/08/2023ರಂದು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ..ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಬೆಂಗಳೂರು ಇವರ ಪತ್ರವನ್ನು ಉಲ್ಲೇಖಿಸಿ ಖಜಾನೆ ಆಯುಕ್ತರು ಕೆಲವು ಸೂಚನೆಗಳನ್ನು ನೀಡಿದ್ದಾರೆ
ಕರ್ನಾಟಕ ಲೋಕಸೇವಾ ಆಯೋಗ ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿಗಳು (RPC) ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಕಲಬುರಗಿ, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗ ಕೇಂದ್ರದಲ್ಲಿ ಪರೀಕ್ಷೆಗಳು ನಡೆಯಲಿವೆ
ಪರೀಕ್ಷೆಯ ಗೌಪ್ಯ ಸಾಮಗ್ರಿಗಳನ್ನು ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಿ ಪರೀಕ್ಷಾ ದಿನಗಳಂದು ನಿಗದಿತ ವೇಳೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಖಜಾನಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿರುತ್ತಾರೆ. ಆದ್ದರಿಂದ ಈ ಸೂಚನೆ ಹೊರಡಿಸಲಾಗಿದೆ.
ಸೂಚನೆಗಳು; ಸದರಿ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ನಿಯಮಗಳನ್ವಯ ನೇಮಿಸಿದ ಪ್ರಾಧಿಕಾರಿಗಳಿಂದ ಖಜಾನೆಗಳಲ್ಲಿ ಅಭಿರಕ್ಷೆಯಲ್ಲಿಟ್ಟುಕೊಂಡು, ಪರೀಕ್ಷಾ ದಿನದಂದು ಪರೀಕ್ಷೆ ಪ್ರಾರಂಭವಾಗುವ ಮುಂಚೆ ಕರ್ನಾಟಕ ಖಜಾನೆ ಸಂಹಿತೆಯ ಅಂಶಗಳಂತೆ ಸಮಯ ಪಾಲನೆ ಮಾಡಲು ಹಾಗೂ ಸದರಿ ವಹಿವಾಟಿನ ಸಂದರ್ಭದಲ್ಲಿ ಜೋಡಿ ಬೀಗದ ಇಬ್ಬರು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ತಿಳಿಸಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿಗಳು ಕೋರಿರುವಂತೆ ಸದರಿ ಪರೀಕ್ಷೆಯ ಗೌಪ್ಯ ಲಕೋಟೆಗಳನ್ನು ಸಂರಕ್ಷಿಸಿಡಲು ಸೂಚಿಸಿದೆ.
ಪರೀಕ್ಷಾ ಗೌಪ್ಯ ಸಾಮಗ್ರಿಗಳ ಅಭಿರಕ್ಷಣೆ ಕುರಿತು ಪ್ರತ್ಯೇಕ ಸುತ್ತೋಲೆ ಹೊರಡಿಸಿದ್ದು, ಸದರಿ ಸುತ್ತೋಲೆಯಲ್ಲಿ ಜೋಡಿ ಬೀಗದ ಕಾರ್ಯನಿರ್ವಹಣೆ ಹಾಗೂ ಭದ್ರತಾ ಕೊಠಡಿಯ ಪೊಲೀಸ್ ಕಾವಲು ಪಡೆ ಸಂಬಂಧ ನಿಗದಿಪಡಿಸಿದ ಕ್ರಮವನ್ನು ಅನುಸರಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.
ಪರೀಕ್ಷಾ ಸಾಮಗ್ರಿಗಳನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳ ಅಧಿಕೃತ ಪತ್ರ ಧೃಡಪಡಿಸಿಕೊಂಡು ಸದರಿ ಅಧಿಕಾರಿಗಳಿಗಲ್ಲದೆ, ಇತರೆ ಅಧಿಕಾರಿಗಳಿಗೆ ವಿತರಿಸತಕ್ಕದ್ದಲ್ಲ ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ವಿತರಿಸಿದ ನಂತರ ಪರೀಕ್ಷಾ ಸಾಮಗ್ರಿಗಳ ಗೌಪ್ಯತೆ ಹಾಗೂ ಸುರಕ್ಷತೆ ಬಗ್ಗೆ ಖಜಾನಾಧಿಕಾರಿಗಳ ಯಾವುದೇ ಜವಾಬ್ದಾರಿ ಇರುವುದಿಲ್ಲ ಎಂಬ ಅಂಶವನ್ನು ಸದರಿ ಅಧಿಕಾರಿಗಳ ಗಮನಕ್ಕೆ ತರುವುದು.
ಈ ಸೂಚನೆಗಳನ್ನು ಪಾಲಿಸದೆ ಈ ಸಂಬಂಧ ಯಾವುದೇ ಸಮಸ್ಯೆಗಳಾಗಲಿ ಅಥವಾ ಪ್ರಕ್ರಿಯಾ ಲೋಪಗಳು ಉದ್ಭವಿಸಿದಲ್ಲಿ ಅಂತಹ ಲೋಪದೋಷಗಳಿಗೆ ಸಂಬಂಧಪಟ್ಟ ಖಜಾನೆಯ ಜೋಡಿ ಬೀಗದ ಅಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಲಾಗಿದೆ