ಬಾಗಲಕೋಟೆ
ಜಿಲ್ಲೆಯ 55 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದು ಜಿ.ಪಂ ಸಿಇಒ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯತ ಸಭಾಬವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಂಚಾಯತ್ ರಾಜ್ ಇಲಾಖೆಯಿಂದ ಮೊದಲ ಹಂತವಾಗಿ ಆಗಷ್ಟ 15 ರಂದು 55 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ಯೋಜನೆ ಪ್ರಾರಂಭಿಸಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ 3 ವರ್ಷದೊಳಗಿನ ಮಕ್ಕಳು ಇದ್ದಲ್ಲಿ ಈ ಮನೆಯಲ್ಲಿ ಪಾಲನೆಗೆ ಬಿಟ್ಟು ಹೋಗಲು ಅನುಕೂಲವಾಗಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಯೋಜನೆಗಳಾದ ಐ.ಸಿ.ಡಿ.ಎಸ್ ಯೋಜನೆ, ಪೂರಕ ಪೌಷ್ಟಿಕ ಆಹಾರ ಯೋಜನೆ, ಅಂಗನವಾಡಿ ಕಟ್ಟಡಗಳು, ಮೂಲಭೂತ ಸೌಕರ್ಯ, ಅಪೌಷ್ಟಿಕ ಮಕ್ಕಳು, ಗೃಹಲಕ್ಷ್ಮೀ ಯೊಜನೆ, ಸ್ತ್ರೀಶಕ್ತಿ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆ, ಸಾಂತ್ಯಾನ, ಬಾಲ್ಯವಿವಾಹ, ಡಿ.ವಿಆಕ್ಟ್, ಸಖಿ, ಮಾತೃವಂದನಾ, ಪೋಷಣಾ ಅಭಿಯಾನ ಮೊದಲಾದ ಯೋಜನೆಗಳ ಪರಿಶೀಲನೆ ಮಾಡಲಾಯಿತು.
ಅಂಗನವಾಡಿ ಕೇಂದ್ರದ ಸಮಯ ಪಾಲನೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದು, ಅಂಗನವಾಡಿ ಕೇಂದ್ರದ ಸ್ವಚ್ಛತೆ, ಉತ್ತಮ ಗುಣಮಟ್ಟದ ಆಹಾರ ಪೂರಕ, ಅಂಗನವಾಡಿ ಕೇಂದ್ರಗಳಿಗೆ ನಿಯಮಿತ ಭೇಟಿ ಹಾಗೂ ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ನಿವೇಶನವನ್ನು ಗುರುತಿಸಲು ಮೇಲ್ವಿಚಾರಕಿಯರಿಗೆ ಸಿಇಒ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬಾಲ್ಯವಿವಾಹ ಆಗದಂತೆ ತಡೆಯುವುದು, ಬಾಲ್ಯ ವಿವಾಹ ನಡೆದಿರುವ ಪುಕರಣಗಳಲ್ಲಿ ಎಫ್.ಆಯ್.ಆರ್ ದಾಖಲಿಸಿ ವರದಿ ಸಲ್ಲಿಸುವುದು, ಸಾಂತಾನ ಕೇಂದ್ರ, ಸಖಿ ಒನ್ ಸ್ಟಾಪ್ ಸೇಂಟರಗಳ ಕುರಿತಂತೆ ವ್ಯಾಪಕ ಪುಚಾರ ಮಾಡಲು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ ಯೋಜನೆಗಳ ಸೌಲಭ್ಯಗಳನ್ನು ಪಡೆಯುವಂತೆ ಆಗಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕರಾದ ಅಕ್ಕಮಹಾದೇವಿ ಕೆ.ಎಚ್, ನಿರೂಪನಾಧಿಕಾರಿ ಅಮರೇಶ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಮೇಲ್ವಿಚಾರಕರು ಉಪಸ್ಥಿತರಿದ್ದರು.