ಬಾಗಲಕೋಟೆ
ಜಿಲ್ಲೆಯಲ್ಲಿ ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಯೋಜನೆ ಸಾಕಾರಕ್ಕೆ ಸಕಲ ಸಿದ್ದತೆ ನೆಡೆದಿದ್ದು, ಅಗಷ್ಟ್ 15 ರಂದು 55 ಕೂಸಿನ ಮನೆಗಳ ಚಾಲನೆಗೆ ಸಜ್ಜಾಗಿವೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದ್ದಾರೆ.
ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ ಹಾಗೂ ಪೋಷಣೆಗಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯತಗಳಲ್ಲಿ ಶಿಶುಪಾಲನಾ ಕೇಂದ್ರಗಳ ಸ್ಥಾಪನೆಗಾಗಿ ಸರ್ಕಾರ ಸನ್ನದ್ದವಾಗಿದೆ.
ಗ್ರಾಮೀಣ ಮಹಿಳೆಯರ ಮಕ್ಕಳ ಪಾಲನೆ-ಪೋಷಣೆಗೆ ಕೂಸಿನ ಮನೆ ಸ್ಥಾಪನೆಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತವಾಗಿ 55 ಗ್ರಾಮ ಪಂಚಾಯತಿಗಳಲ್ಲಿ ಕೂಸಿನ ಮನೆ ಸ್ಥಾಪಿಸಲಾಗಿದೆ. 6 ವರ್ಷದವರೆಗಿನ ಮಕ್ಕಳನ್ನು ಶಿಶುಪಾಲನಾ ಕೇಂದ್ರಗಳಲ್ಲಿ ದಾಖಲು ಮಾಡಬಹುದಾಗಿದ್ದು, ತಿಂಗಳಲ್ಲಿ 26 ದಿನಗಳ ಕಾಲ ಪ್ರತಿ ದಿನ 6 ರಿಂದ 8 ತಾಸು ಕೇಂದ್ರಗಳು ಕಾರ್ಯನಿರ್ವಹಿಸಲಿವೆ.
ಮಕ್ಕಳ ಪಾಲನೆ-ಪೋಷಣೆಗಾಗಿ ಬಹುತೇಕ ಪೋಷಕರು ಮನೆಯಲ್ಲಿಯೇ ಉಳಿಯುತ್ತಿದ್ದಾರೆ. ಅಂತಹವರು ಕೂಲಿ ಕೆಲಸ, ಉದ್ಯೋಗಕ್ಕೆ ಹೋಗಲು ಅವಕಾಶ ಕಲ್ಪಿಸುವುದು, ಕಾರ್ಮಿಕರ ವಲಸೆ ತಪ್ಪಿಸುವುದು, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಶಿಕ್ಷಣ ನೀಡುವುದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸುವುದು ಕೂಸಿನ ಮನೆ ಸ್ಥಾಪನೆಯ ಆಶಯವಾಗಿದೆ.
ಶಿಶುಪಾಲನಾ ಕೇಂದ್ರಗಳಲ್ಲಿ ಮಕ್ಕಳ ಪಾಲನೆ, ಆರೈಕೆಗಾಗಿ ವಿಶೇಷವಾಗಿ 10ನೇ ತರಗತಿ ಪಾಸಾದ ನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತದೆ. ಅವರ ಜಾಬ್ ಕಾರ್ಡ ಆಧಾರದ ಮೇಲೆ ವರ್ಷವಿಡೀ ಕಾರ್ಯಪಾಲನೆಗಾಗಿ ತಲಾ ಒಂದು ಕೇಂದ್ರಕ್ಕೆ 8 ಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಸ್ಥಳೀಯ ಮಟ್ಟದ ಆರೋಗ್ಯ ಕೇಂದ್ರದ ವೈದ್ಯರು ಕಾಲಕಾಲಕ್ಕೆ ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳ ತಪಾಸಣೆ ನಡೆಸಿ, ಮಕ್ಕಳ ವಯಸ್ಸು, ಎತ್ತರ, ತೂಕ ಆಧರಿಸಿ ಸಮತೋಲನ ಆಹಾರ ನೀಡುವ ಕುರಿತು ಅವರ ಸಲಹೆ ಮೇರೆಗೆ ಮಕ್ಕಳಿಗೆ ಆಹಾರ ನೀಡಲಾಗುತ್ತದೆ. ಅಲ್ಲದೇ ಆಟ, ಪಾಠ ಹೇಳಿ ಕಲಿಕೆಗೆ ಅಣಿಗೊಳಿಸಲಾಗುತ್ತದೆ.
ಗ್ರಾಮೀಣ ಭಾಗದಲ್ಲಿ ಹೊಲ-ಗದ್ದೆಗಳಲ್ಲಿ ನಿತ್ಯ ಕೆಲಸ ಮಾಡುವ ರೈತ ಮಹಿಳಾ ಕಾರ್ಮಿಕರಿಗೆ, ಕೂಲಿ ಕಾರ್ಮಿಕರು, ತರಕಾರಿ, ಹಾಲು, ಮೊಸರು ಮಾರಾಟಕ್ಕಾಗಿ ತಾಲೂಕು ಕೇಂದ್ರಗಳಲ್ಲಿ ತೆರೆಳುವ ಮಹಿಳೆಯರಿಗೆ ಕೂಸಿನ ಮನೆಗಳು ಅನುಕೂಲವಾಗಲಿವೆ.
*ಕೂಸಿನ ಮನೆಗಳ ಮಾಹಿತಿ*
——————-
ಜಿಲ್ಲೆಯ ಬದಾಮಿ ತಾಲೂಕಿನಲ್ಲಿ 5, ಬಾಗಲಕೋಟೆ 14, ಬೀಳಗಿ 5, ಗುಳೇದಗುಡ್ಡ 12, ಹುನಗುಂದ 7, ಇಲಕಲ್ 7, ಜಮಖಂಡಿ 2, ಮುಧೋಳ 1 ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 2 ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 55 ಮೂಲ ಸೌಲಭ್ಯ ಹೊಂದಿರುವ ಸರಕಾರಿ ಕಟ್ಟಡಗಳನ್ನು ಕೇಂದ್ರಗಳಿಗಾಗಿ ಗುರುತಿಸಲಾಗಿದೆ.